ಬಳಸಿ ಬಿಸಾಡಿದ ಮಾಸ್ಕ್ ಗಳನ್ನೇ ಆಯ್ದು ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಖದೀಮರು!

mask 23 mar 20
Published on

ಮುಂಬೈ: ಸಾರ್ವಜನಿಕರೇ ಎಚ್ಚರ! ಮಾಸ್ಕ್​ ಖರೀದಿಸುವಾಗ ಹಲವು ಬಾರಿ ಯೋಚನೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಏಕೆಂದರೆ ಬಳಸಿ ಬಿಸಾಡಿದ ಮಾಸ್ಕ್​ಗಳನ್ನು ಸಂಗ್ರಹಿಸಿ ಅವುಗಳನ್ನು ತೊಳೆದು ಇಸ್ತ್ರಿ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ.

ಮುಂಬೈನ ವಿರಾರ್ ಪ್ರದೇಶದ ಗೋದಾಮು ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಬಳಸಿದ ಮಾಸ್ಕ್​ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ವಿರಾರ್​ ಪೂರ್ವ ಪ್ರದೇಶದಲ್ಲಿ ಮೂವರು ಬಳಸಿದ ಮಾಸ್ಕ್​ಗಳನ್ನು ಪೌರ ಕಾರ್ಮಿಕರಿಂದ ಸಂಗ್ರಹಿಸಿ ಅವುಗಳನ್ನು ವಾಷಿಂಗ್​ ಮಿಷಿನ್​ನಲ್ಲಿ ಹಾಕಿ ಒಗೆದು ನಂತರ ಇಸ್ತಿ ಮಾಡಿ ಪ್ಯಾಕ್​ ಮಾಡುತ್ತಿದ್ದರು. ಪ್ಯಾಕ್​ ಮೇಲೆ ಎನ್​-95 ಮಾಸ್ಕ್​ ಎಂಬ ಲೇಬಲ್​ ಅಂಟಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತಯಾರಿ ನಡೆಸಿದ್ದರು.

ಪೊಲೀಸರಿಗೆ ಬಂದ ಮಾಹಿತಿ ಆಧರಿಸಿ ಗೋದಾಮು ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು.

ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್​ ಧರಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಾಸ್ಕ್​ಗೆ ಬೇಡಿಕೆ ವ್ಯಕ್ತವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಬಳಸಿದ ಮಾಸ್ಕ್​ಗಳನ್ನು ತೊಳೆದು ಮಾರಾಟ ಮಾಡಲು ಮುಂದಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net