

ಬೆಂಗಳೂರು: ಸಾರ್ವಜನಿಕರು ಯಾವುದೇ ರೀತಿಯ ಸಮಸ್ಯೆ, ಪರಿಹಾರ ಹಾಗೂ ಮಾಹಿತಿಗಾಗಿ ಗೂಗಲ್ನಲ್ಲಿ ಸಿಗುವ ಸಹಾಯವಾಣಿಗಳಿಗೆ ಕರೆ ಮಾಡುತ್ತಿರುವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟಿಪಿ ನಂಬರ್ ಹಂಚಿಕೊಳ್ಳುವ ಮೂಲಕ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಸಿಐಡಿ ಸೈಬರ್ ವಿಭಾಗದ ಎಸ್ಪಿ ಶರತ್ ಹೇಳಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ‘ಸೈಬರ್ ಅಪರಾಧ ಮತ್ತು ಸುರಕ್ಷತೆ’ ಬಗ್ಗೆ ಮಂಗಳವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ಮಾತನಾಡಿದರು.
ಸೈಬರ್ ವಂಚಕರು ಪ್ರತಿಷ್ಠಿತ ಕಂಪನಿಗಳಿಗೆ ಹೋಲುವ ರೀತಿಯಲ್ಲೇ ಗೂಗಲ್ನಲ್ಲಿ ಹೆಸರು, ಸಹಾಯವಾಣಿ ಸಂಖ್ಯೆ ಹಾಗೂ ವಿಳಾಸ ಅಪ್ಲೋಡ್ ಮಾಡುತ್ತಿದ್ದಾರೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳ ಪರಿಹಾರ ಹಾಗೂ ಕಚೇರಿಗಳ ವಿಳಾಸಕ್ಕಾಗಿ ಗೂಗಲ್ನಲ್ಲಿ ಹುಡುಕುತ್ತಿರುವ ಜನರೇ ಸೈಬರ್ ವಂಚಕರ ಟಾರ್ಗೆಟ್. ಗೂಗಲ್ನಲ್ಲಿ ಸಿಗುವ ನಂಬರ್ಗಳಿಗೆ ಕರೆ ಮಾಡಿದರೆ, ಸಹಾಯ ಮಾಡುವ ನೆಪದಲ್ಲಿ ವೈಯಕ್ತಿಕ ವಿವರ ಪಡೆದು ಮೋಸ ಮಾಡುತ್ತಿದ್ದಾರೆ ಎಂದರು.
ಯಾವುದೇ ಕಂಪನಿಯ ಗ್ರಾಹಕರು, ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಯಾ ಕಂಪನಿಯ ಆಪ್ಗಳ ಮುಖಾಂತರವೇ ಮುಟ್ಟಿಸಬೇಕು. ಗೂಗಲ್ನಲ್ಲಿ ಸಿಗುವ ಅನಾಮಿಕ ನಂಬರ್ಗಳಿಗೆ ಒಮ್ಮೆ ಕರೆ ಮಾಡಿದರೆ ಸಾಕು, ಸೈಬರ್ ವಂಚಕರು ಹಿಂಬಾಲಿಸುತ್ತಾರೆ. ನಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಆಮಿಷಗಳನ್ನು ಒಡ್ಡಿ ಯಾಮಾರಿಸುತ್ತಾರೆ ಎಂದರು.
ವಿದ್ಯಾವಂತರೇ ಹಳ್ಳಕ್ಕೆ: ಪ್ರತಿಯೊಂದು ಸೈಬರ್ ವಂಚನೆಗೂ ಒಟಿಪಿ ನಂಬರ್ (ಒನ್ ಟೈಂ ಪಾಸ್ವರ್ಡ್) ಮೂಲ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರ ಒಟಿಪಿ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲೂ ವಂಚನೆಗೆ ಬಳಕೆ ಆಗುತ್ತಿದೆ. ಹೀಗಾಗಿ, ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬಾರದು. ಇದು ಸೈಬರ್ ಕ್ರೖೆಂ ತಡೆಗೆ ಸೂಕ್ತ ಕ್ರಮ. ಪ್ರಸಕ್ತ ವರ್ಷ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ದೂರು ನೀಡಿದವದರಲ್ಲಿ ಬಹುತೇಕರು ವಿದ್ಯಾವಂತರಾಗಿದ್ದಾರೆ. ಗೌಪ್ಯ ಮಾಹಿತಿಯನ್ನು ಸೈಬರ್ ವಂಚಕರಿಗೆ ಕೊಟ್ಟು ಹಣ ಕಳೆದುಕೊಂಡವರಾಗಿದ್ದಾರೆ. ನಿಮ್ಮ ದಡ್ಡತನ ಹಾಗೂ ನಿರ್ಲಕ್ಷ್ಯವನ್ನೇ ಸೈಬರ್ ವಂಚಕರ ಬಂಡವಾಳವಾಗಿದೆ ಎಂದು ಸಲಹೆ ನೀಡಿದರು.
ವಿವೇಚನೆಯಿಂದ ಅಂತರ್ಜಾಲ ಬಳಸಿ
ಬಹುತೇಕರು ಅಂತರ್ಜಾಲ ಬಳಸುತ್ತಿದ್ದಾರೆ. ವಿವಿಧ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದಾರೆ. ಅದರ ಜೊತೆಗೆ ಸೈಬರ್ ವಂಚಕರು ಹೆಚ್ಚಾಗುತ್ತಿದ್ದಾರೆ. ಅಂತರ್ಜಾಲ ಬಳಕೆಯ ಕುರಿತು ಅರಿವಿಲ್ಲದಿರುವುದೇ ವಂಚನೆಗೆ ದಾರಿಯಾಗಿದೆ. ವಿವೇಚನೆ ಹಾಗೂ ಸುರಕ್ಷತೆಯಿಂದ ಅಂತರ್ಜಾಲ ಬಳಸಿದರೆ ಸೈಬರ್ ವಂಚನೆ ಪ್ರಮಾಣ ಕಡಿಮೆಯಾಗುತ್ತದೆ. ಗೌಪ್ಯ ಮಾಹಿತಿ ಹಂಚಿಕೊಳ್ಳದೇ ಪ್ರತಿಯೊಬ್ಬರು ಸೈಬರ್ ಶುಚಿತ್ವ ಪಾಲಿಸಬೇಕಿದೆ ಎಂದು ವಿಜ್ಞಾನಿ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದರು.
ಸೈಬರ್ ಅಪರಾಧಗಳಲ್ಲಿ 30 ಬಗೆ
30 ಬಗೆಯ ಸೈಬರ್ ಅಪರಾಧಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಿ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರ, ಅಕ್ಟೋಬರ್ ತಿಂಗಳನ್ನು ‘ಸೈಬರ್ ಅಪರಾಧ ತಡೆ ಮಾಸ’ ಎಂದು ಘೊಷಿಸಿದೆ. ನಾವು ಬಳಸುತ್ತಿರುವ ಮೊಬೈಲ್ ಆಪ್ಗಳು ಸುರಕ್ಷಿತವೇ ಎಂಬುದು ಖಾತ್ರಿಪಡಿಸಿಕೊಳ್ಳಬೇಕು. ಪಾಸ್ವರ್ಡ್ಗಳನ್ನು ಆಗಾಗ ಬದಲಾಯಿಸುತ್ತಿರಬೇಕು ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಜಿ. ಅನಂತಪ್ರಭು, ಹೇಳಿದರು.