ಕೇರಳ ಸರಣಿ ಸ್ಫೋಟ ಪ್ರಕರಣ: ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ, ಕರ್ನಾಟಕ, ದೆಹಲಿಯಲ್ಲಿ ಹೈಅಲರ್ಟ್​

Kerala Blast
Published on

ಕೊಚ್ಚಿ: ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿ ಪಟ್ಟಣದಲ್ಲಿ ಇಂದು ಬೆಳಗ್ಗೆ ಸರಣಿ ಸ್ಫೋಟವಾಗಿದ್ದು, ಓರ್ವ ಸಾವಿಗೀಡಾಗಿ, 36 ಮಂದಿ ಗಾಯಗೊಂಡಿದ್ದಾರೆ. ಇದೀಗ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಹೈ ಅಲರ್ಟ್​ ಘೋಷಣೆಯಾಗಿದೆ. ಈ ದಾಳಿಗೆ ಹಮಾಸ್​-ಇಸ್ರೇಲ್​ ನಡುವಿನ ಯದ್ಧದ ನಂಟು ಕೂಡ ಕೇಳಿಬಂದಿದೆ.

ಇಂದು ಬೆಳಗ್ಗೆ 9.30ರ ಸುಮಾರಿಗೆ ಯೆಹೋವನ ಸಾಕ್ಷಿಗಳ ಸಮಾವೇಶ ನಡೆಯುತ್ತಿದ್ದ ಕಲಮಸ್ಸೆರಿ ಸಾಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸ್​ ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗಾಯಾಳುಗಳ ಅಂಕಿ-ಅಂಶಗಳನ್ನು ದೃಢಪಡಿಸಿದ್ದು, ಘಟನೆಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ. ತನಿಖೆ ನಡೆಯುತ್ತಿದ್ದು, ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಕನ್ವೆನ್ಶನ್ ಸೆಂಟರ್‌ ಸಂಬಂಧಿಸಿದ ಅನೇಕ ವಿಡಿಯೋಗಳಲ್ಲಿ ಬೆಂಕಿ ಮತ್ತು ಭಯದಲ್ಲಿರುವ ಜನರ ದೃಶ್ಯಗಳನ್ನು ತೋರಿಸಿವೆ.

ರಜೆಯಲ್ಲಿರುವವರು ವಾಪಸ್​ ಬನ್ನಿ

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಜೆಯಲ್ಲಿರುವ ಎಲ್ಲ ಆರೋಗ್ಯ ಕಾರ್ಯಕರ್ತರನ್ನು ತಕ್ಷಣವೇ ಕೆಲಸಕ್ಕೆ ಹಿಂತಿರುಗುವಂತೆ ಆದೇಶಿಸಿದ್ದು, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಕರ್ನಾಟಕ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಹೈ ಅಲರ್ಟ್​

ಕೇರಳದ ಕಲಮಸ್ಸೆರಿಯಲ್ಲಿ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಫೋಟದ ಬೆನ್ನಲ್ಲೇ ಕರ್ನಾಟಕ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಮಂಗಳೂರಿನಲ್ಲೂ ಪೊಲೀಸರು ಹೈಅಲರ್ಟ್​ ಆಗಿದ್ದಾರೆ. ಜನನಿಬಿಡ ಸ್ಥಳಗಳಲ್ಲಿ ವಿಶೇಷ ನಿಗಾ ಇರಿಸಲಾಗಿದೆ. ಗುಪ್ತಚರ ಏಜೆನ್ಸಿಗಳೊಂದಿಗೆ ಪೊಲೀಸ್ ಇಲಾಖೆ ನಿರಂತರ ಸಂಪರ್ಕದಲ್ಲಿದೆ. ಈ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಜನಸಂದಣಿ ಇರುವ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲೂ ಪೊಲೀಸರಿಗೆ ಈಗಾಗಲೇ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ಹೋಗಿದ್ದು, ಹೈಅಲರ್ಟ್​ ಆಗಿದ್ದಾರೆ.

ಇಸ್ರೇಲ್​ ಯುದ್ಧದ ಲಿಂಕ್​

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ನಡುವೆ ಭಾರತದಲ್ಲಿ ಯಹೂದಿ ಸ್ಥಳಗಳಲ್ಲಿ ಸಂಭವನೀಯ ದಾಳಿಗಳ ಬಗ್ಗೆ ಗುಪ್ತಚರ ಸಂಸ್ಥೆಗಳು ಮೊದಲೇ ಎಚ್ಚರಿಕೆ ನೀಡಿದ್ದವು. ಭಾರತದಲ್ಲಿನ ಯಹೂದಿ ಸ್ಥಳಗಳು ಭಯೋತ್ಪಾದಕರ ಗುರಿಯಾಗಿರಬಹುದು ಎಂದು ಸೂಚಿಸಿತ್ತು. ಇತ್ತೀಚೆಗೆ ದೆಹಲಿ ಪೊಲೀಸ್ ವಿಶೇಷ ದಳದಿಂದ ಬಂಧಿಸಲ್ಪಟ್ಟ ಇಬ್ಬರು ಐಸಿಸ್ ಭಯೋತ್ಪಾದಕರು ಮುಂಬೈನ ಪ್ರಮುಖ ಯಹೂದಿ ತಾಣವಾದ ಚಾವಾರ್ಡ್ ಹೌಸ್ ಮೇಲೆ ದಾಳಿ ನಡೆಸಿ, ಆ ಸ್ಥಳದ ವಿಡಿಯೋಗಳನ್ನು ವಿದೇಶಿ ಭಯೋತ್ಪಾದಕರಿಗೆ ಕಳುಹಿಸಿದ್ದರು. ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಅಲ್ ಸುಫಾ ಎಂಬ ಭಯೋತ್ಪಾದಕ ಸಂಘಟನೆಯ ಜಾಲವನ್ನು ಭದ್ರತಾ ಏಜೆನ್ಸಿಗಳು ಬಹಿರಂಗಪಡಿಸಿವೆ. ಭಾರತದಲ್ಲಿನ ಯಹೂದಿಗಳ ತಾಣಗಳು ಭಯೋತ್ಪಾದಕರ ಗುರಿಯಾಗಿದೆ. ಸೆಂಟ್ರಲ್ ಏಜೆನ್ಸಿಯು ಇತ್ತೀಚೆಗೆ ಇಂತಹ ಹಲವು ರಹಸ್ಯ ಮಾಹಿತಿಗಳನ್ನು ಸ್ವೀಕರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸ್ಥಳಗಳಲ್ಲಿ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ

ಕೇರಳ ಡಿಜಿಪಿ ಸ್ಫೋಟದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದು ಐಇಡಿ ಸ್ಫೋಟದ ಸಾಧ್ಯತೆಯಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯು ಸ್ಫೋಟಕ್ಕೆ ಕಾರಣವಾದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಹೋಲುವ ಬೆಂಕಿಯ ಸಾಧನ ಬಳಸಿರುವುದನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಧನವು ಬೆಂಕಿಯನ್ನು ಪ್ರಚೋದಿಸುವ ಸ್ಫೋಟಕವನ್ನು ಹೊಂದಿದೆ. ಆದಾಗ್ಯೂ, ವಿವರವಾದ ವಿಧಿವಿಜ್ಞಾನ ಪರೀಕ್ಷೆಯ ನಂತರ ಸ್ಫೋಟಕ ವಸ್ತುಗಳ ನಿರ್ಣಾಯಕ ಗುರುತನ್ನು ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟಿಫಿನ್ ಬಾಕ್ಸ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಎರ್ನಾಕುಲಂ ಸ್ಫೋಟದ ನಂತರ ಕೇರಳಕ್ಕೆ ಧಾವಿಸುತ್ತಿರುವ ಪ್ರಸ್ತುತ ದೆಹಲಿಯಲ್ಲಿರುವ ಕಲಮಸ್ಸೆರಿ ಶಾಸಕ ಮತ್ತು ಕೇರಳ ಸಚಿವ ಪಿ. ರಾಜೀವ್​, ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಓರ್ವ ಮಹಿಳೆ ಸಾವನ್ನಪ್ಪಿದ್ದು, 36 ಜನರು ಆಸ್ಪತ್ರೆಯಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. 36 ಜನರಲ್ಲಿ 4 ಜನರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ ಮತ್ತು ಇಬ್ಬರನ್ನು ಗಂಭೀರ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net