ಕೇರಳದ ಬಾಂಬ್​ ಸ್ಫೋಟ ಸ್ಥಳಕ್ಕೆ ಎನ್​ಐಎ ಎಂಟ್ರಿ

bomb
Published on

ತಿರುವನಂತಪುರ: ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ಸರಣಿ ಬಾಂಬ್​ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಪಟ್ಟು, 36 ಮಂದಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ(ಎನ್‌ಐಎ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಪ್ರಾರ್ಥನಾ ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮೂರು ಬಾರಿ ಸ್ಫೋಟ ಸಂಭವಿಸಿದೆ. ಕೊಚ್ಚಿಯಿಂದ 10 ಕಿಲೋಮೀಟರ್ ದೂರದಲ್ಲಿರುವ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಸುಮಾರು 2,000 ಜನ ಭಾಗವಹಿಸಿದ್ದರು. ಟಿಫಿನ್ ಬಾಕ್ಸ್ ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. ಹೀಗಾಗಿ ಇದನ್ನು ಸಭೆಗೆ ತಂದವರು ಯಾರು? ಇದು ಆಯೋಜಕರ ಗಮನಕ್ಕೆ ಬಂದಿರಲಿಲ್ಲವೇ? ಅಥವಾ ತಾತ್ಸಾರ ಮಾಡಲಾಯಿತೇ? ಸ್ಫೋಟದ ಹಿಂದಿನ ಶಕ್ತಿಗಳು ಯಾವುವು ಎಂಬುದರ ಕುರಿತು ಎನ್​ಐಎ ಕೂಲಂಕುಶ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸ್ಫೋಟಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಫೊರೆನ್ಸಿಕ್ ತಂಡ ಸ್ಥಳಕ್ಕೆ ತಲುಪಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಬಾಂಬ್​ ಸ್ಫೋಟ 'ದುರದೃಷ್ಟಕರ' ಎಂದು ಬಣ್ಣಿಸಿದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಫೋಟದ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಎನ್​ಐಎ ತನಿಖೆಗೆ ಸಹಕರಿಸುತ್ತಿದ್ದಾರೆ.

ಸ್ಫೋಟದಲ್ಲಿ ಇನ್ನೂ ಇಬ್ಬರ ಸ್ಥಿತಿ ಚಿಂತಾಜನಿಕವಾಗಿದ್ದು, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜನರು ಮತ್ತು ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು. ಸಭಾಂಗಣದಲ್ಲಿ ಚದುರಿದ ಮತ್ತು ಹಾನಿಗೊಳಗಾದ ಕುರ್ಚಿಗಳಿಂದ ಕೆಲವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದರು. ಸ್ಫೋಟದ ನಂತರ ನೂರಾರು ಜನ ಸಮಾವೇಶ ಕೇಂದ್ರದ ಹೊರಗೆ ಜಮಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net