

ಹಾವೇರಿ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಕಾಯಿಲೆಗಳು ಹರಡದಂತೆ ಅಗತ್ಯ ಮುಂಜಾಗ್ರತೆ ವಹಿಸಲು ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಬೇಕಾದರೆ ಮೊದಲು ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗ್ರತಿ ಅಗತ್ಯವಾಗಿದೆ. ಜನರಿಗೆ ಕಾಯಿಲೆಗಳ ಗಂಭೀರತೆ ಕುರಿತು ಅರಿವು ಮೂಡಿಸಬೇಕು ಆಗ ಮಾತ್ರ ಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದರು.
ಸಾಂಕ್ರಾಮಿಕ ರೋಗಗಳ ಹತೋಟಿಗೆ ಜನರ ಸಾಹಕಾರ ಅಷ್ಟೇ ಮುಖ್ಯವಾಗಿದೆ. ಜನರು ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಮೆಡಿಸಿನ್ಗಳ ಸಂಗ್ರಹಣೆಯಾಗಬೇಕು, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗಬೇಕು ಎಂದರು.
ಡಿಎಚ್ಒ ಡಾ. ರಾಜೇಶ ಸುರಗಿಹಳ್ಳಿ ಹಾಗೂ ಡಿಎಸ್ ಡಾ. ಜಗದೀಶ ಪಾಟೀಲ ಸಭೆಗೆ ಅಗತ್ಯ ಮಾಹಿತಿ ನೀಡಿ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ 2024 ರಿಂದ ಸೆಪ್ಟೆಂಬರ್ 2024 ರ ವರೆಗೆ ನಾಯಿ ಕಡಿತಕ್ಕೆ ಒಳಗಾದ ಪ್ರಕರಣಗಳು ಒಟ್ಟು 2,682 ಪತ್ತೆಯಾಗಿದ್ದು, ಎಲ್ಲ ರೋಗಿಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಯಾವುದೇ ರೇಬಿಸ್ ರೋಗದ ಲಕ್ಷಣಗಳು ಕಂಡುಬಂದಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.