

ಬೆಂಗಳೂರು: ದೇಶದ ಪ್ರಮುಖ ಅಗರಬತ್ತಿ ಉತ್ಪಾದಕ ಕಂಪನಿಗಳಲ್ಲಿ ಒಂದಾದ ‘ಮೈಸೂರು ಡೀಪ್ ಪರ್ಫ್ಯೂಮರಿ ಹೌಸ್ (ಎಂಡಿಪಿಎಚ್)’ ಕರಕುಶಲ ವಸ್ತುಗಳ ರಫ್ತು ಉತ್ತೇಜನಾ ಮಂಡಳಿ (ಇಪಿಸಿಎಚ್) ಕೊಡಮಾಡುವ ಪ್ರತಿಷ್ಠಿತ ರಫ್ತು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮಂಡಳಿಯ ವತಿಯಿಂದ ನವದೆಹಲಿಯಲ್ಲಿ ಹಮ್ಮಿಕೊಳ್ಳಲಾದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲಿ ವಿವಿಧ ವಿಭಾಗಳಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ 123 ಭಾರತೀಯ ಕರಕುಶಲ ರಫ್ತುದಾರರನ್ನು ಗುರುತಿಸಿತು ಪ್ರಶಸ್ತಿ ನೀಡಲಾಯಿತು.
ಎಂಡಿಪಿಎಚ್ ಸಂಸ್ಥೆಯ ನಿರ್ದೇಶಕ ಅಂಕಿತ್ ಅಗರವಾಲ್ ಮಾತನಾಡಿ, ಭಾರತದಿಂದ ಪ್ರಶಸ್ತಿ ಗೆದ್ದ ಮೊದಲ ಕಂಪನಿ ಎಂಡಿಪಿಎಚ್ ಆಗಿದೆ. ಪ್ರಶಸ್ತಿ ದೊರೆತಿದ್ದು ಸಂತಸ ತಂದಿದೆ. ಈ ಸಾಧನೆಯೂ ನಮ್ಮ ನಿರಂತರ ಅನ್ವೇಷಣೆಗೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಈ ತರನಾದ ಪ್ರೋತ್ಸಾಹ ಜಗತ್ತಿನ ವಿವಿಧ ಭಾಗಗಳಿಗೆ ಅಗರಬತ್ತಿ ರಫ್ತುಗಳನ್ನು ವಿಸ್ತರಿಸಲು ಅನುವು ಮಾಡಿಕೊಟ್ಟಿದೆ.
ಆಧುನಿಕ ಗ್ರಾಹಕರಿಗೆ ಹೊಂದಿಕೊಳ್ಳುವ ಜತಗೆ ಸಾಂಪ್ರದಾಯಿಕ ಅಗರಬತ್ತಿ ತಯಾರಿಕೆಯ ಕಲೆಯನ್ನು ಸಂರಕ್ಷಿಸುವುದು ಕಂಪನಿಯ ಆದ್ಯತೆ. ನುರಿತ ಕುಶಲಕರ್ವಿುಗಳು, ಉತ್ತಮ ತಂಡದಿಂದ ಇಂತಹ ಸಾಧನೆ ಸಾಧ್ಯವಾಗಿದೆ. ಕಂಪನಿಯೂ ದೇಶಿಯ ಹಾಗೂ ಅಂತಾರಾಷ್ಟ್ರೀಯಮಟ್ಟದಲ್ಲಿ ಗ್ರಾಹಕರನ್ನು ಹೊಂದಿದ್ದು. 150 ದೇಶಗಳಿಗೆ ರಫ್ತು ವಹಿವಾಟು ಹೊಂದಿರುವುದಾಗಿ ತಿಳಿಸಿದರು. ಕೇಂದ್ರ ಜವಳಿ ಸಚಿವರಾದ ಗಿರಿರಾಜ್ ಸಿಂಗ್, ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಷಾ ಸೇರಿ ಇತರ ಗಣ್ಯರು ಇದ್ದರು.