ಸಂಶೋಧನೆಗಳ ನೆಪದಲ್ಲಿ ಪರಿಸರ ನಾಶ ಸಲ್ಲ: ಎನ್‌ಸಿಬಿಎಸ್ ನಿರ್ದೇಶಕ ಪ್ರೊ. ಶಶಿಧರ ಅಭಿಮತ

gkvk
Published on

ಬೆಂಗಳೂರು: ವಿಜ್ಞಾನಿಗಳು ಸಂಶೋಧನೆಗಳ ಅಳವಡಿಕೆ ನೆಪದಲ್ಲಿ ಭೌಗೋಳಿಕ ಪರಿಸರ ನಾಶವಾಗದಂತೆ ಸುಸ್ಥಿರ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್) ನಿರ್ದೇಶಕ ಪ್ರೊ. ಎಲ್.ಶಶಿಧರ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್ ಜಿಕೆವಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯ ಸೋಮವಾರ ಆಯೋಜಿಸಿದ್ದ ‘ಸ್ನಾತಕೋತ್ತರ ವಿಜ್ಞಾನ ಸಪ್ತಾಹ-2023’ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿದ್ಯಾರ್ಥಿಗಳು ಗುಣಮಟ್ಟದ ಸಂಶೋಧನೆಗೆ ಒತ್ತು ನೀಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.

ಮೈಕ್ರೋಸ್ಕೋಪ್, ಟೆಲಿಸ್ಕೋಪ್‌ಗಳು ಕಂಡುಹಿಡಿದ ನಂತರ ಸಂಶೋಧನೆಗೆ ಹೆಚ್ಚು ಪ್ರಮುಖ್ಯತೆ ದೊರೆಯಿತು. ಸಂಶೋಧನೆ ಬದುಕಿನ ಒಂದು ಕ್ರಮವಾಗಿದೆ. ಇಂದಿನ ಸಂಶೋಧನೆಗಳು ಭವಿಷ್ಯದ ಅಭಿವೃದ್ಧಿಗೆ ಬುನಾದಿಯಾಗಿದ್ದು, ಯುವಜನತೆ ಸಂಶೋಧನೆಗಳ ಬಗ್ಗೆ ಹೆಚ್ಚು ಒತ್ತು ನೀಡಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಳಿ, ಮಣ್ಣು ಮತ್ತು ನೀರು ಹೆಚ್ಚಿನ ಪ್ರಮಾಣದಲ್ಲಿ ಮಾಲಿನವಾಗುತ್ತಿದೆ. ಇದಕ್ಕೆ ಮನುಷ್ಯನ ಹಸ್ತಕ್ಷೇಪ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ನಮ್ಮ ಪರಿಸರವನ್ನು ಕಾಪಾಡಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು ಎಂದು ಪ್ರೊ. ಎಲ್.ಶಶಿಧರ ಮನವಿ ಮಾಡಿದರು.

ಉತ್ಪಾದಕತೆ ಹೆಚ್ಚಿಸಲು ತಾಂತ್ರಿಕತೆ ಅಳವಡಿಸಿರಿ:

ಕೃಷಿ ವಿವಿಯ ಆಡಳಿತ ಮಂಡಳಿ ಸದಸ್ಯ ಡಾ. ಟಿ.ಕೆ.ಪ್ರಭಾಕರ ಶೆಟ್ಟಿ ಮಾತನಾಡಿ, ಭಾರತದಲ್ಲಿ ಕೃಷಿಕರ ಸರಾಸರಿ ಭೂ ಇಡುವಳಿ ದಶಕದ ಹಿಂದೆ 1.5 ಹೆಕ್ಟೇರ್‌ನಷ್ಟಿದ್ದು, ಪ್ರಸ್ತುತ್ತ 1.30 ಹೆಕ್ಟೇರ್‌ಗೆ ಇಳಿಕೆ ಕಂಡಿದೆ. ಲಭ್ಯವಿರುವ ಜಾಗದಲ್ಲಿ ಉತ್ಪಾದಕತೆ ಹೆಚ್ಚಿಸಲು ನೂತನ ತಾಂತ್ರಿಕತೆಗಳಾದ ರೋಬಟ್ ಅಳವಡಿಕೆ, ಕೊಯ್ಲಿನೋತ್ತರ ತಂತ್ರಜ್ಞಾನಗಳ ಅಳವಡಿಕೆ, ಸಂವೇದಕಗಳ ಬಳಕೆ ಹಾಗೂ ಇತರೆ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ಮಟ್ಟದ ಗುರಿಯನ್ನು ತಲುಪಬಹುದು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ. ಕೆ.ಸಿ.ನಾರಾಯಣಸ್ವಾಮಿ, ಡೀನ್ (ಕೃಷಿ) ಡಾ. ಎನ್.ಬಿ. ಪ್ರಕಾಶ್, ಕುಲಸಚಿವ ಡಾ. ಬಸವೇಗೌಡ, ಡೀನ್ (ಸ್ನಾತಕೋತ್ತರ) ಡಾ. ಎಚ್.ಸಿ.ಪ್ರಕಾಶ್ ಮತ್ತು ಆಡಳಿತ ಮಂಡಳಿ ಸದಸ್ಯ ಡಾ. ಎಚ್.ಎಲ್. ಹರೀಶ್ ಉಪಸ್ಥಿತರಿದ್ದರು.

ವಿಜ್ಞಾನ ಸಪ್ತಾಹವು ಸಂಶೋಧನೆಯ ಮೂಲಭೂತ ಹಾಗೂ ಅನ್ವಯಿಕ ಆಯಾಮಗಳೆರಡನ್ನೂ ಪರಿಚಯಿಸುವುದರ ಜತೆಗೆ ಪರಿಣಾಮಕಾರಿ ಸಂವಹನ ಪ್ರಾವೀಣ್ಯತೆಯನ್ನು ಸಾಧಿಸಲು ನೆರವಾಗುತ್ತದೆ. ವಿಜ್ಞಾನ ಸಪ್ತಾಹದಿಂದ ವಿದ್ಯಾರ್ಥಿಗಳ ಕೌಶಲ್ಯವನ್ನು ಉತ್ತಮ ಪಡಿಸಿಕೊಳ್ಳಬೇಕು, ಮಂಡಿಸುವ ಅತ್ಯುತ್ತಮ ಕೃಷಿ ನವೋದ್ಯಮಕ್ಕೆ ಆರ್ಥಿಕ ನೆರವು ನೀಡಲಾಗುವುದು.

- ಡಾ. ಎಸ್.ವಿ.ಸುರೇಶ, ಬೆಂಗಳೂರು ಕೃಷಿ ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net