

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ರಾಜ್ಯಾದ್ಯಂತ ಮತ್ತೆ ಆರಂಭಗೊಂಡ ಮರುದಿನವೇ ಬಿಯರ್ ಹಾಗೂ ವೈನ್ ಹೊರತುಪಡಿಸಿ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್)ಮೇಲಿನ ದರ ಏರಿಕೆಗೊಂಡಿದೆ. ಬೆಲೆ ಹೆಚ್ಚಳದ ಹೊರತಾಗಿಯೂ ಮದ್ಯದ ಬೇಡಿಕೆ ಅಧಿಕಗೊಂಡಿದ್ದು, ಮಂಗಳವಾರ ಕೂಡ ಹಲವೆಡೆ ದಾಸ್ತಾನು ಖಾಲಿಯಾಗಿದೆ. ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6 ಹೆಚ್ಚಿಸಲಾಗಿದೆ. 90 ಎಂಎಲ್ ಬಾಟಲ್ ಮದ್ಯದ ಬೆಲೆ 85 ಪೈಸೆ ಹಾಗೂ 180 ಎಂಎಲ್ ಬಾಟಲ್ ಮದ್ಯ 2 ರೂ.ಏರಿಕೆಯಾಗಿದೆ. ಪ್ರತಿ ಬಲ್ಕ್ ಲೀಟರ್ ಆಧಾರದಲ್ಲಿ ಅಬಕಾರಿ ಸುಂಕದ ದರ ಹೆಚ್ಚಳಗೊಂಡಿವೆ.
ಕಳೆದ ಬಜೆಟ್ನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.6 ಹೆಚ್ಚಿಸಿತ್ತು. ಏಪ್ರಿಲ್ನಿಂದಲೇ ಇದು ಜಾರಿಯಾಗಬೇಕಿತ್ತಾದರೂ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. 42 ದಿನಗಳಿಂದ ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಸೋಮವಾರ (ಮೇ 4) ಮರುಆರಂಭವಾಗಿದೆ. ಹೊಸ ದರ ಅನ್ವಯ ಪ್ರಕಾರ ಮದ್ಯ ಮಾರಾಟ ಮಾಡಲಾಗುತ್ತದೆ. ರಾಜ್ಯ ಪಾನೀಯ ನಿಗಮದಲ್ಲಿ (ಕೆಎಸ್ಬಿಸಿಎಲ್) ಸಂಗ್ರಹವಾಗಿರುವ ಮದ್ಯವನ್ನೂ ಹೊಸ ದರದ ಅನ್ವಯವೇ ಮಾರಾಟ ಮಾಡುವಂತೆ ಅಬಕಾರಿ ಇಲಾಖೆ ಮದ್ಯದಂಗಡಿ ಮಾಲೀಕರಿಗೆ ಸೂಚಿಸಿದೆ. ಕಳೆದ ವರ್ಷ ಬಿಯರ್, ವೈನ್ ಹಾಗೂ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿತ್ತು. ಈ ವರ್ಷ ಲಿಕ್ಕರ್ಗಷ್ಟೇ ಸೀಮಿತವಾಗಿ ಬೆಲೆ ಹೆಚ್ಚಳ ಮಾಡಲಾಗಿದೆ.
ದೇಶಾದ್ಯಂತ ಏರಿದ ನಶೆ: ಲಾಕ್ಡೌನ್ ನಿಯಮ ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ದೇಶಾದ್ಯಂತ ಭರ್ಜರಿ ವಹಿವಾಟು ನಡೆದಿದೆ. ಉತ್ತರ ಪ್ರದೇಶದಲ್ಲಿ ಒಂದೇ ದಿನ 100 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಆಂಧ್ರದಲ್ಲಿ ಶೇ.75 ತುಟ್ಟಿ: ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಶೇ.75 ಏರಿಕೆ ಆಗಿದೆ. ದೆಹಲಿ ಸರ್ಕಾರ ಕೂಡ ಶೇ.70 ಏರಿಕೆ ಮಾಡಿದೆ. ಈ ದರವನ್ನು ಕರೊನಾ ಶುಲ್ಕ ಎಂದು ಕರೆಯಲಾಗಿದೆ.
242 ಕೋಟಿ ರೂ. ವಹಿವಾಟು: ರಾಜ್ಯಾದ್ಯಂತ ಮೊದಲ ದಿನ 45 ಕೋಟಿ ರೂ. ಮದ್ಯದ ವಹಿವಾಟು ನಡೆದರೆ, ಎರಡನೇ ದಿನ 242 ಕೋಟಿ ರೂ. ದಾಟಿದೆ. ಮಂಗಳವಾರ ಒಂದೇ ದಿನ 182 ಕೋಟಿ ರೂ.ಗಳ 36.37 ಲಕ್ಷ ಲೀಟರ್ ಮದ್ಯ ಹಾಗೂ 15 ಕೋಟಿ ರೂ. ಮೌಲ್ಯದ 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಎರಡು ದಿನದಲ್ಲಿ 10.92 ಲಕ್ಷ್ಷ ಲೀಟರ್ ಬಿಯರ್, 44.42 ಲಕ್ಷ ಲೀಟರ್ ಐಎಂಎಲ್ ಮಾರಾಟವಾಗಿರುವುದು ಹೊಸ ದಾಖಲೆಯಾಗಿರುವುದಾಗಿ ಅಬಕಾರಿ ಇಲಾಖೆ ತಿಳಿಸಿದೆ.