ಸೂಕ್ಷ್ಮರೂಪದಿಂದ ಅರಮನೆಯನ್ನು ಪ್ರವೇಶಿಸಿದರು

-68d0424c65eb7
Published on
ಶ್ರೀರಾಮನ ಜಿಜ್ಞಾಸೆಯನ್ನು ತೃಪ್ತಿಪಡಿಸಲು ಶ್ರೀ ವಸಿಷ್ಠರು ಮಂಡಪೋಪಾಖ್ಯಾನ ಎಂಬ ವಿಶಿಷ್ಟ ತಂತ್ರವನ್ನು ಬಳಸಿ ಉಪದೇಶ ಮಾಡುತ್ತಿದ್ದಾರೆ. ಈಗ ಮಂಡಪೋಪಾಖ್ಯಾನದ ಪ್ರಮುಖವಾದ ತಿರುವಿನಲ್ಲಿ ನಾವಿದ್ದೇವೆ. ವಿದೂರಥನು ಲೀಲಾಹಾರಾಣಿಯ ಪತಿಯಾದ ಪದ್ಮಮಹಾರಾಜನ ಮುಂದಿನ ಜನ್ಮ. ಅವನನ್ನು ನೋಡಬೇಕೆಂಬ ಕುತೂಹಲದಿಂದ ಲೀಲಾಮಹಾರಾಣಿಯು ಶ್ರೀದೇವಿಯ ಜೊತೆಗೆ ಸೂಕ್ಷ್ಮರೂಪದಿಂದ ಅವನ ರಾಜಧಾನಿಗೆ ಬಂದಿದ್ದಾಳೆ.

ಆ ವೇಳೆಗೆ ವಿದೂರಥನ ರಾಜಧಾನಿಯ ಸಮೀಪದಲ್ಲಿ ಮಹಾಸಂಗ್ರಾಮ ನಡೆಯುತ್ತಿತ್ತು. ಸಮಗ್ರ ಭಾರತದೇಶದ ಎಲ್ಲ ರಾಜ್ಯಗಳ ಸೇನೆಗಳು ಅಲ್ಲಿ ಭಾಗವಹಿಸಿದ್ದವು. ವಿದೂರಥನಿಗೂ ಸಿಂಧುರಾಜನ ಕಡೆಯವರಿಗೂ ನಡೆದ ಈ ಮಹಾಯುದ್ಧದಲ್ಲಿ ತುಂಬಾ ದೊಡ್ಡ ಸಂಖ್ಯೆಯಲ್ಲಿ ಸಾವು-ನೋವುಗಳಾಗಿವೆ. ಯುದ್ಧದ ಕೊನೆಯಲ್ಲಿ ಎರಡೂ ಪಕ್ಷದವರು ಯುದ್ಧವನ್ನು ನಿಲ್ಲಿಸಬೇಕೆಂಬ ನಿರ್ಣಯಕ್ಕೆ ಬಂದಿದ್ದಾರೆ. ಆ ದಿನ ರಾತ್ರಿಯ ಬೀಭತ್ಸ ವಾತಾವರಣವನ್ನು ಸುದೀರ್ಘವಾಗಿ ವರ್ಣಿಸಿದ ಶ್ರೀವಸಿಷ್ಠರು ಈಗ ಕಥೆಯ ಮುಂದಿನ ಭಾಗಕ್ಕೆ ಹೋಗುತ್ತಿದ್ದಾರೆ. ಸೂಕ್ಷ್ಮರೂಪದಿಂದ ಬಂದ ಲೀಲಾಮಹಾರಾಣಿ ಮತ್ತು ದೇವಿಯರು ಅದೇ ರೂಪದಿಂದಲೇ ವಿದೂರಥನ ಅರಮನೆಯನ್ನು ಪ್ರವೇಶಿಸುತ್ತಾರೆ. ಇದನ್ನು ಶ್ರೀ ವಸಿಷ್ಠರ ಮಾತಿನ ಮೂಲಕವೇ ಅವಲೋಕಿಸೋಣ.

‘ಶ್ರೀರಾಮ! ಈ ತನಕ ಹೇಳಿದಂತೆ ಆ ರಣಾಂಗಣದಲ್ಲಿ ನಿಶಾಚರರ ಘೊರ ವರ್ತನೆಯಿಂದ ರಣಾಂಗಣವು ಭಯಾನಕವಾಗಿತ್ತು. ಹಗಲಿನಲ್ಲಿ ಜನರು ಸಹಜವಾಗಿ ತಮ್ಮ ತಮ್ಮ ವ್ಯವಹಾರಗಳನ್ನು ಮಾಡುತ್ತಾ ನಗರದಲ್ಲಿ ನೆರೆದಿರುವಂತೆ, ಅಷ್ಟೇ ಸಹಜವಾಗಿ ಆ ನಿಶಾಚರರು ರಾತ್ರಿಯ ವೇಳೆ ಅವರ ಸ್ವಭಾವಕ್ಕೆ ತಕ್ಕಂತೆ ವ್ಯವಹರಿಸುತ್ತಾ ಅಲ್ಲಿ ನೆರೆದಿದ್ದರು. ಅಲ್ಲದೇ ಯಮನ ದೂತರು ಮತ್ತು ನಿಕೃಷ್ಟರಾದ ಪಿಶಾಚಾದಿಗಳು ಅಲ್ಲಿ ಸೇರಿದ್ದರು. ಇವರೆಲ್ಲರೂ ಅವರವರ ಸ್ವಭಾವಸಹಜವಾದ ಚೇಷ್ಟೆಯಲ್ಲಿ ತೊಡಗಿದ್ದರು. ದಟ್ಟವಾದ ಕತ್ತಲೆ ಆವರಿಸಿಕೊಂಡಿತ್ತು. ಕೈ ಬೀಸಿದರೆ ಹಿಡಿಯಲು ಸಿಗುವುದೋ ಎಂಬಷ್ಟರ ಮಟ್ಟಿಗೆ ದಟ್ಟವಾಗಿರುವ ಕತ್ತಲೆಯ ಉಂಡೆಗಳಿಂದ ಕಟ್ಟಲ್ಪಟ್ಟಿರುವ ಗೋಡೆಗಳುಳ್ಳ ಮನೆಯಂತೆ ಆ ರಾತ್ರಿಯು ಗೋಚರಿಸುತ್ತಿತ್ತು. ಅಲ್ಲಿ ಸೇರಿರುವ ಭೂತ ಸಮೂಹಗಳಿಗೆ ಹಿಂದೆಂದೂ ಸಿಗದಷ್ಟು ಸಮೃದ್ಧವಾಗಿ ಭಕ್ಷ್ಯಗಳು ಸಿಕ್ಕಿವೆ. ಆದ್ದರಿಂದ ಆಹಾರದ ಯಾಚನೆಯ ದೈನ್ಯ ಅವರಿಗೆ ಈಗಿಲ್ಲ.

ಅದು ಎಷ್ಟು ಗಡಬಡಿಸಿ ಓಡಿ ಹೋಗಿದೆ ಎಂದರೆ, ಓಡುತ್ತಿರುವಾಗ ಧರಿಸಿದ ಬಟ್ಟೆಗಳು ಬಿದ್ದುಹೋದ ಬಗ್ಗೆ ಪರಿವೇ ಇಲ್ಲದಷ್ಟು ಭಯದಿಂದ ಓಡಿಹೋಗಿದೆ! ಅಂದರೆ ಅಷ್ಟೊಂದು ಸಮೃದ್ಧ ವಾಗಿ ಭಕ್ಷ್ಯಗಳು ಅಲ್ಲಿ ಸಿಕ್ಕಿವೆ. (ಬಹುಶಃ ಉಳಿದ ದಿನಗಳಲ್ಲಿ ಅವುಗಳಿಗೆ ಆಹಾರ ದೊರೆಯುವುದು ಎಷ್ಟೋಸಲ ಕಷ್ಟವಾಗುತ್ತಿರಬಹುದು.) ಇಂತಹ ಅವಸ್ಥೆಯಲ್ಲಿ ಭೂತ ಸಮೂಹಗಳು ಕ್ರೀಡಿಸುತ್ತಿವೆ.’‘ರಣರಂಗದ ಸ್ಥಿತಿ ಹೀಗಿದ್ದರೆ ಇನ್ನು ನಗರದಲ್ಲಿ ಎಲ್ಲ ಕಡೆ ನಿಶ್ಶಬ್ದವಾದ ವಾತಾವರಣ, ಕತ್ತಲೆಯೊಂದೇ ಎಲ್ಲ ಕಡೆ ಸಂಚರಿಸುತ್ತಿದೆ. ಮತ್ತೆ ಯಾರ ಸಂಚಾರವೂ ಇಲ್ಲ. ಎಲ್ಲ ದಿಕ್ಕುಗಳಲ್ಲೂ ಇರುವ ಎಲ್ಲ ಪ್ರಾಣಿ ಗಳೂ ನಿದ್ರೆಯಲ್ಲಿ ಬಂಧಿಸಲ್ಪಟ್ಟಿವೆ. ಈ ಸ್ಥಿತಿಯಲ್ಲಿ ಲೀಲಾಮಹಾರಾಣಿಯ (ಹಿಂದಿನ ಜನ್ಮದಲ್ಲಿ) ಪತಿಯಾದ ವಿದೂರಥನು ಯುದ್ಧದ ಕಾರಣದಿಂದ ಸ್ವಲ್ಪ ಖಿನ್ನನಾದವನಂತೆ ತನ್ನ ಅರಮನೆಯಲ್ಲಿ ಕುಳಿತಿದ್ದ. ಇದಕ್ಕೆ ಅವನ ಉದಾರ ಸ್ವಭಾವವೇ ಕಾರಣ. ಅವನಿಗೆ ಅವನ ಸಾಮಂತ ರಾಜರ ಜೊತೆ ಯುದ್ಧವನ್ನು ಮಾಡಲು ಅಷ್ಟಾಗಿ ಇಷ್ಟವಿರಲಿಲ್ಲ.

ಅನಿವಾರ್ಯವಾಗಿ ಯುದ್ಧದಲ್ಲಿ ತೊಡಗಲೇಬೇಕಾಗಿ ಬಂದಿತ್ತು. ಹಾಗಾಗಿ ಅವನಿಗೆ ಸ್ವಲ್ಪ ಮಟ್ಟಿನ ಖಿನ್ನತೆ ಉಂಟಾಗಿತ್ತು. ಮುಂದಾಲೋಚನೆಯಲ್ಲಿ ನಿಪುಣರಾದ ಮಂತ್ರಿಗಳ ಜೊತೆ ಮರುದಿನ ಬೆಳಿಗ್ಗೆ ಏನು ಮಾಡಬೇಕೆಂಬುದನ್ನು ಆತ ಸಮಾಲೋಚನೆ ಮಾಡಿದನು. ಅನಂತರ ಹಿಮದಂತೆ ತಂಪಾಗಿರುವ, ದೀರ್ಘ ಚಂದ್ರನಂತೆ ಸುಂದರವಾಗಿರುವ ಶಯನದಲ್ಲಿ ಮಲಗಿದನು. ಅವನ ಸುಂದರವಾದ ಅರಮನೆಯು ಚಂದ್ರನ ಉದರದಂತೆ ತಂಪಗಿನ ಒಳ ಕೋಣೆಯುಳ್ಳದ್ದು. ಅಂತಹ ಕೋಣೆಯಲ್ಲಿ ಸುಮಾರು ಒಂದು ಮುಹೂರ್ತದಷ್ಟು ವೇಳೆ ನಿದ್ರೆಗೆ ಒಳಗಾದನು.

ಕಮಲದ ಹೂವಿನ ಎಸಳುಗಳು ಸೂರ್ಯಾಸ್ತದ ನಂತರ ಮುದುಡಿಕೊಳ್ಳು ವಂತೆ ಅವನ ಕಣ್ಣುಗಳು ಮುಚ್ಚಿಹೋದವು.’ ‘ಇದಾದ ನಂತರ ಅವನು ನಿದ್ರೆಯಲ್ಲಿರುವಾಗ ಶ್ರೀದೇವಿ ಮತ್ತು ಲೀಲಾಮಹಾರಾಣಿಯರು ಯುದ್ಧರಂಗದ ಆಕಾಶವನ್ನು ಬಿಟ್ಟು ಸೂಕ್ಷ್ಮರೂಪದಿಂದಲೇ ವಿದೂರಥನ ಭವನ ವನ್ನು ಪ್ರವೇಶಿಸಿದರು. ಗಾಳಿ ಒಳಬರಲು ಇಟ್ಟಿದ್ದ ಕಿಟಕಿಯು ಮುಚ್ಚಿದ್ದರೂ ಅದರ ಚಿಕ್ಕ ರಂಧ್ರಗಳ ಮೂಲಕ ಒಳಗೆ ಪ್ರವೇಶಿಸಿದರು. ಮುಚ್ಚಿಕೊಂಡಿ ರುವ ಕಮಲದ ಮೊಗ್ಗಿನೊಳಗೆ ವಾಯು ಪ್ರವೇಶಿಸಿದಂತೆ ಪ್ರವೇಶಿಸಿದರು.’

ರಂಧ್ರದೊಳಗೆ ಸೂಕ್ಷ್ಮಶರೀರದಿಂದ ಪ್ರವೇಶ ಮಾಡಿದ್ದನ್ನು ಕೇಳಿದಾಗ ಶ್ರೀರಾಮನ ಮನಸ್ಸಿನಲ್ಲೊಂದು ಪ್ರಶ್ನೆ ಉದ್ಭವವಾಯಿತು. ಅವನು ಕೇಳಿದ-‘ಪೂಜ್ಯರೇ! ನೀವು ವೇದಶಾಸ್ತ್ರವಾšಯವನ್ನು ಬಲ್ಲ ವರಲ್ಲಿ ಅಗ್ರಗಣ್ಯರು. ನನ್ನ ಮನಸ್ಸಿನಲ್ಲೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಈ ಮನುಷ್ಯ ಶರೀರವು ನಾಲ್ಕು ಹಸ್ತಗಳಷ್ಟು ದೀರ್ಘವಾಗಿರುತ್ತದೆ. ಇಂತಹ ಸ್ಥೂಲಶರೀರವು ನೂಲಿನಂತೆ ಸೂಕ್ಷ್ಮವಾಗಿರುವ ರಂಧ್ರದ ಮೂಲಕ ಹೇಗೆ ಪ್ರವೇಶ ಮಾಡಿತು?’ ಹಿಂದೆ ಇದೇ ಇಬ್ಬರು ಸ್ತ್ರೀಯರು ಅತಿಸೂಕ್ಷ್ಮವಾದ ಬ್ರಹ್ಮಾಂಡಛಿದ್ರವನ್ನು ದಾಟಿ ಹೊರಗೆ ಹೋದ ಸಂದರ್ಭ ಬಂದಿತ್ತು. ಆಗಲೂ ಶ್ರೀರಾಮನು ಆತಿವಾಹಿಕ ಶರೀರದ ಬಗ್ಗೆ ಕೇಳಿದ್ದನು. ಆಗ ವಸಿಷ್ಠರಿಂದ ಉತ್ತರ ಪಡೆದಿದ್ದರೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು ಅದನ್ನು ದೃಢಪಡಿಸಿಕೊಳ್ಳಲು ಈಗ ಆತಿವಾಹಿಕ ಶರೀರದ ಬಗ್ಗೆ ಮತ್ತೆ ಕೇಳಿದ್ದಾನೆ. (ಇದಕ್ಕೆ ಶ್ರೀವಸಿಷ್ಠರ ಉತ್ತರ ಮುಂದೆ ಬರಲಿಕ್ಕಿದೆ)

(ಪ್ರತಿಕ್ರಿಯಿಸಿ: vvsudina@gmail.com, info swarnavalli@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net