

ಶಿವಮೊಗ್ಗ : ಒಳ ಮೀಸಲಾತಿ ಸಮೀಕ್ಷೆಗೆ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ಬಂಜಾರ ಜನಾಂಗದವರು ಲಂಬಾಣಿ ಅಥವಾ ಬಂಜಾರ ಎಂದೇ ಜಾತಿ ನಮೂದಿಸಬೇಕು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ತಿಳಿಸಿದ್ದಾರೆ.
ಮೇ 5ರಿಂದ 17ರವರೆಗೆ ರಾಜ್ಯಾದ್ಯಂತ ಒಳ ಮೀಸಲಾತಿ ಸಮೀಕ್ಷೆ ನಡೆಯಲಿದೆ. ಪರಿಶಿಷ್ಟ ಜಾತಿ, ಉಪ ಜಾತಿಯ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಲಾಗುತ್ತದೆ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಜಾರಿ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಲಾಗಿದೆ. ತಾಂಡಾದ ನಾಯಕ್, ಕಾರ್‌ಬಾರಿ, ದಾವೋ, ಗ್ರಾಪಂ ಸದಸ್ಯರು, ವಿದ್ಯಾರ್ಥಿಗಳು, ಮಹಿಳೆಯರು, ಯುವ ನಾಯಕರು ಜಾಗ್ರತೆ ವಹಿಸಿ ಬಂಜಾರ(ಲಂಬಾಣಿ) ಎಂದು ನಮೂದಿಸುವಂತೆ ತಿಳಿಸಿದರು.
ಸ್ವಯಂ ಘೋಷಣೆಗೆ ಆಧಾರ್ ಸಂಖ್ಯೆ ಮತ್ತು ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ಕಡ್ಡಾಯ. ಜಾತಿ ಪ್ರಮಾಣ ಪತ್ರ ಕೂಡಲೇ ಮಾಡಿಸಿಕೊಳ್ಳಬೇಕು. ಸಮೀಕ್ಷೆಯಲ್ಲಿ ಸಂಗ್ರಹಿಸುವ ಅಂಕಿ ಅಂಶದಿಂದ ನಮ್ಮ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದರು.
ಪ್ರಮುಖರಾದ ಗಿರೀಶ್, ರಾಘವೇಂದ್ರ ನಾಯ್ಕ, ನಂಜಾ ನಾಯ್ಕ, ಚೂಡಾ ನಾಯ್ಕ, ಮಂಜುನಾಥ್, ಸಾಕಮ್ಮಬಾಯಿ, ಪುಷ್ಪಾಬಾಯಿ, ಕುಮಾರ ನಾಯ್ಕ, ದರ್ಶನ್, ರಾಮಾ ನಾಯ್ಕ, ಉಮಾಮಹೇಶ್ವರ ನಾಯ್ಕ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.