ಜಿಎಸ್​ಟಿ ಲಾಭ ಜನರಿಗೆ ತಲುಪುವಂತೆ ನೋಡಿಕೊಳ್ಳಿ

modi
Published on

ನವದೆಹಲಿ: ಬಿಜೆಪಿ-ಎನ್​ಡಿಎ ಸರ್ಕಾರಗಳು ದೇಶಕ್ಕೆ ಉತ್ತಮ ಆಡಳಿತದ ಹೊಸ ಮಾದರಿಯನ್ನು ನೀಡಿದ್ದು, ಜಿಎಸ್​ಟಿ ಸುಧಾರಣೆಯ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೆಹಲಿ ಬಿಜೆಪಿ ಘಟಕದ ನೂತನ ಸ್ವಂತ ಕಟ್ಟಡವನ್ನು ಸೋಮವಾರ ಉದ್ಘಾಟಿಸಿದ ಮೋದಿ ಈ ವಿಷಯ ಪ್ರಸ್ತಾಪಿಸಿದರು.

ನಾವು ಜಿಎಸ್​ಟಿ ಪರಿಚಯಿಸಿದಾಗ ಬೆಲೆಗಳು ಇಳಿದವು, ಇದೀಗ ಮುಂದಿನ ಪೀಳಿಗೆಯ ಜಿಎಸ್​ಟಿ ಸುಧಾರಣೆಗಳನ್ನು ತಂದಿರುವುದರಿಂದ ಪ್ರತಿ ಮನೆ ಕೇವಲ 5ರಿಂದ 6 ಸಾವಿರ ರೂ. ತೆರಿಗೆ ನೀಡುವಂತಾಗಿದೆ. 2014ರ ಸುಮಾರಿಗೆ ಹೋಲಿಸಿದರೆ ಅದರಲ್ಲಿ ಈಗ 20 ಸಾವಿರ ರೂಪಾಯಿಯಷ್ಟು ಉಳಿತಾಯವಾಗುತ್ತಿದೆ. ಜನರ ಉಳಿತಾಯವನ್ನು ಹೆಚ್ಚಿಸುವುದರ ಬಗ್ಗೆ ನಮ್ಮ ಸರ್ಕಾರಗಳು ಗಮನ ಹರಿಸಿದ್ದು, ಬಿಜೆಪಿ ಸರ್ಕಾರಗಳು ‘ಸತ್ತಾ’ಕ್ಕಾಗಿ (ಅಧಿಕಾರ) ಇರದೆ ‘ಸೇವೆ’ಗಾಗಿ ಇವೆ ಎಂದು ಪ್ರಧಾನಿ ಪ್ರತಿಪಾದಿಸಿದರು. ದೆಹಲಿಯಲ್ಲಿನ ಬಿಜೆಪಿ ಕಾರ್ಯಕರ್ತರು ದೇಶದ ಎಲ್ಲ ಭಾಗಗಳ ಹಬ್ಬಗಳನ್ನು ಆಚರಿಸುವ ಮೂಲಕ ರಾಷ್ಟ್ರ ರಾಜಧಾನಿಯನ್ನು ‘ಮಿನಿ ಇಂಡಿಯಾ’ ಆಗಿಸಬೇಕು ಎಂದೂ ಮೋದಿ ಹೇಳಿದರು. ಸುಮಾರು 45 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಬಿಜೆಪಿ ದೆಹಲಿ ಘಟಕ ಸ್ವಂತ ಹೊಸ ಕಟ್ಟಡದ ಕನಸನ್ನು ನನಸಾಗಿಸಿಕೊಂಡಿದ್ದು, ಡಿಡಿಯು ಮಾರ್ಗದಲ್ಲಿರುವ ಐದು ಅಂತಸ್ತುಗಳ ಕಟ್ಟಡ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಸುಸಜ್ಜಿತವಾಗಿದ್ದು ದಕ್ಷಿಣ ಭಾರತೀಯ ವಾಸ್ತುಶಿಲ್ಪದ ಸ್ಪರ್ಶ ಹೊಂದಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಹಲವು ಕೇಂದ್ರ ಸಚಿವರು ಮತ್ತು ಬಿಜೆಪಿ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್​ದೇವ ಮೊದಲಾದವರ ಸಮ್ಮುಖದಲ್ಲಿ ನೂತನ ಕಟ್ಟಡವನ್ನು ಮೋದಿ ಲೋಕಾರ್ಪಣೆಗೊಳಿಸಿದರು. ಪಂಡಿತ್ ಪಂತ್ ಮಾರ್ಗದಲ್ಲಿರುವ ಹಾಲಿ ಕಚೇರಿಯನ್ನು ದೀಪಾವಳಿ ಹೊತ್ತಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ. ಕಟ್ಟಡದ ಪ್ರವೇಶದ್ವಾರ ಮತ್ತು ಮುಂಭಾಗದಲ್ಲಿ ಎತ್ತರದ ಕಂಬಗಳ ಸಹಿತ ದಕ್ಷಿಣ ಭಾರತೀಯ ವಾಸ್ತುಶಿಲ್ಪದ ಅಂಶಗಳನ್ನು ಅಳವಡಿಸಲಾಗಿದೆ. 825 ಚದರ ಮೀಟರ್ ನಿವೇಶನದಲ್ಲಿರುವ ಕಟ್ಟಡದ ನಿಮಾಣ ವಿಸ್ತಾರ 30,000 ಚದರ ಅಡಿ ಆಗಿದೆ. ಪರಿಸರ ಸ್ನೇಹಿಯಾಗಿರುವ ಕಟ್ಟಡದಲ್ಲಿ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net