

ಎಂಥ ಕ್ಲಿಷ್ಟಕರ ಸನ್ನಿವೇಶ ಇದ್ದಾಗಲೂ ಅದರ ದುರ್ಲಾಭ ಪಡೆಯುವ, ಆ ಮೂಲಕ ಜನರನ್ನು ವಂಚಿಸುವ ಒಂದಿಷ್ಟು ಸಮಾಜವಿರೋಧಿ ಶಕ್ತಿಗಳು ಸದಾ ಸಕ್ರಿಯವಾಗಿ ಇರುತ್ತವೆ. ಇಂಥವರಿಗೆ ಈಗ ಕರೊನಾ ಕೂಡ ದುಡ್ಡು ಲಪಟಾಯಿಸುವ ದಂಧೆ ಆಗಿಬಿಟ್ಟಿದೆ. ಸೈಬರ್ ವಂಚನೆ ಮೂಲಕ ಅಮಾಯಕ ಜನರನ್ನು ವಂಚಿಸಲು ಯತ್ನಿಸುತ್ತಿರುವವರಿಗೆ ಕರೊನಾ ಹೊಸ ಅಸ್ತ್ರವಾಗಿದೆ. ಹೊಸ ತಂತ್ರ, ವಿಧಾನಗಳನ್ನು ಬಳಸಿ ಮೋಸ ಮಾಡುತ್ತಿರುವ ಜಾಲಗಳ ವಿರುದ್ಧ ಕಠಿಣ ಕ್ರಮ ಅಗತ್ಯವಾಗಿದ್ದು, ಸೈಬರ್ ಸುರಕ್ಷೆಯನ್ನು ಮತ್ತಷ್ಟು ಭದ್ರಪಡಿಸುವ ಮತ್ತು ಈ ಬಗ್ಗೆ ಜನಸಾಮಾನ್ಯರಲ್ಲೂ ಅರಿವು ಮೂಡಿಸುವ ಕೆಲಸ ಆಗಬೇಕಿದೆ.
ತೀರಾ ಜನಸಾಮಾನ್ಯರಿಂದ ಹಿಡಿದು ವಿವಿಧ ರಂಗಗಳ ಸಾಧಕರವರೆಗೂ ಕರೊನಾ ಸಂಕಷ್ಟಕ್ಕೆ ಮಿಡಿದು ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಇಂಥ ಸ್ಪಂದನೆ ಈಗಿನ ಅಗತ್ಯವೂ ಹೌದು. ಆದರೆ, ಇದರ ದುರ್ಲಾಭ ಪಡೆದು ಪಿಎಂ ಕೇರ್ ಫಂಡ್ನ ವೆಬ್ಸೈಟ್ನ್ನೇ ಹೋಲುವಂಥ ನಕಲಿ ವೆಬ್ಸೈಟ್ ರೂಪಿಸಿ, ಜನರ ದುಡ್ಡು ಲಪಟಾಯಿಸುವ ಜಾಲ ಬೆಳಕಿಗೆ ಬಂದಿದೆ. ಇದೊಂದೇ ಪ್ರಕರಣವಲ್ಲ. ಕರೊನಾ ಹೊತ್ತಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವಾಗುತ್ತೇವೆ, ಅವರಿಗೆ ಅಗತ್ಯ ವಸ್ತು ತಲುಪಿಸುತ್ತೇವೆ ಎಂಬ ಸೋಗಿನಲ್ಲಿ ಹಲವು ನಕಲಿ ವೆಬ್ಸೈಟ್ಗಳು ತಲೆ ಎತ್ತಿದ್ದು, ಜನರು ತಮ್ಮ ದುಡ್ಡು ಅಪಾತ್ರರ ಪಾಲಾಗದಂತೆ ಎಚ್ಚರ ವಹಿಸಬೇಕಿದೆ.
ಕರೊನಾ ನೆರವಿನ ಹೆಸರಲ್ಲೇ ವಾಟ್ಸ್ಆಪ್, ಮೇಸೆಂಜರ್, ಇ-ಮೇಲ್ಗಳ ಮೂಲಕ ಬರುತ್ತಿರುವ ಲಿಂಕ್ಗಳಿಗಂತೂ ಲೆಕ್ಕವೇ ಇಲ್ಲ. ಈ ಲಿಂಕ್ ಕ್ಲಿಕ್ ಮಾಡಿದರೆ ಬ್ಯಾಂಕ್ ಖಾತೆ ವಿವರ, ಮೊಬೈಲ್ ನಂಬರ್ ಇತ್ಯಾದಿಗಳಿಗೆ ಉತ್ತರಿಸುವಂತೆ ಕೇಳಲಾಗುತ್ತದೆ. ನಿಜವೆಂದು ಭಾವಿಸಿ ವಿವರ ತುಂಬಿದರೆ ಖಾತೆಯನ್ನೇ ಹ್ಯಾಕ್ ಮಾಡಿ, ಹಣ ಲಪಟಾಯಿಸಲಾಗುತ್ತಿದೆ. ವಂಚಕರಿಗೆ ಇದು ಸುಲಭಮಾರ್ಗವಾಗಿ ಪರಿಣಮಿಸಿದೆ.ಹೊಸರೂಪದ ವಂಚನೆಯೊಂದು ಬೆಳಕಿಗೆ ಬಂದಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಅದೇನೆಂದರೆ, ಕರೊನಾ ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಪ್ರಮುಖ, ಪ್ರತಿಷ್ಠಿತ ಆಸ್ಪತ್ರೆಗಳನ್ನೇ ಗುರಿಯಾಗಿಸಿ, ಅಲ್ಲಿನ ರೋಗಿಗಳ ಚಿಕಿತ್ಸಾ ವಿವರ, ಅಂಕಿಅಂಶಗಳನ್ನು ಒಳಗೊಂಡ ಕಂಪ್ಯುಟರ್ಗಳನ್ನು ಹ್ಯಾಕ್ ಮಾಡಿ, ‘ಡಿಜಿಟಲ್ ಲಾಕ್’ ಹಾಕುತ್ತಿದ್ದಾರೆ ವಂಚಕರು. ಬಳಿಕ, ಆಸ್ಪತ್ರೆಗಳಿಗೆ ಫೋನ್ ಮಾಡಿ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟು, ಹಣ ಪಾವತಿಸಿದರಷ್ಟೇ, ನಿಮ್ಮ ಮಾಹಿತಿಗಳು ವಾಪಸ್ ಸಿಗುತ್ತವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ರೋಗಿಗಳ ವಿವರ, ಚಿಕಿತ್ಸಾಮಾಹಿತಿಯನ್ನು ಇದು ಒಳಗೊಂಡಿರುವುದರಿಂದ ವೈದ್ಯರಿಗೆ, ಆಸ್ಪತ್ರೆಗಳಿಗೆ ಈ ಸಂಗತಿಗಳು ಮುಖ್ಯವಾಗುತ್ತವೆ. ಮುಂದಿನ ಚಿಕಿತ್ಸೆ ಮುಂದುವರಿಸಲು ತುಂಬ ಕಷ್ಟ. ಹಾಗಾಗಿ, ಇಂಥ ವಂಚಕರ ಬೆದರಿಕೆಗೆ ಮಣಿದು, ದುಡ್ಡು ನೀಡಿ, ಕಂಪ್ಯೂಟರ್ ಹ್ಯಾಕಿನಿಂದ ಮುಕ್ತಿ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹಲವು ದೇಶಗಳಲ್ಲಿ ಇಂಥ ಪ್ರಕರಣಗಳು ವರದಿ ಆಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕರೊನಾ ಸಂಕಷ್ಟವನ್ನು ನಿವಾರಿಸುವ ಭರದಲ್ಲಿ ಇಂಥ ವಿಷಯಗಳು ಗೌಣವಾದರೆ, ವಂಚಕರಿಗೆ ಮತ್ತಷ್ಟು ಲಾಭ. ಹಾಗಾಗದಿರಲಿ. ಸೈಬರ್ ಸುರಕ್ಷತೆ ಹೆಚ್ಚಿಸಲು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಲಿ.