ಶ್ರೀಗಂಧ ಮರಗಳ ಲೂಟಿ ತನಿಖೆ ಕಳವು ವೇಳೆ ನಿರ್ಲಕ್ಷ್ಯ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಗಡುವು

page 6 6
Published on

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಬೆಲೆ ಬಾಳುವ ಶ್ರೀಗಂಧದ ಮರಗಳ ಲೂಟಿ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ.

ಲಾಕ್​ಡೌನ್​ನ ನಿರ್ಬಂಧ ಲಾಭ ಬಳಸಿಕೊಂಡು ವನ್ಯಜೀವಿಧಾಮದಲ್ಲಿ ಬೆಳೆದಿದ್ದ ಅನೇಕ ಶ್ರೀಗಂಧದ ಮರಗಳನ್ನು ಕಡಿಯಲಾಗಿದೆ. ಈ ಕುರಿತು ವಿಜಯವಾಣಿ ಏ.27ರಂದು ‘ಲಾಕ್​ಡೌನಲ್ಲಿ ಶ್ರೀಗಂಧ ಮರ ಲೂಟಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಶ್ರೀಗಂಧದ ಮರ ಕಳ್ಳತನ ಪತ್ತೆಹಚ್ಚಲು ವಿಫಲರಾಗಿರುವುದರ ಸಂಬಂಧ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಶಿಸ್ತುಕ್ರಮ ಕೈಗೊಳ್ಳಲು ತನಿಖೆ ಮಾಡಿ ಸಮಗ್ರ ವರದಿಯನ್ನು 3 ದಿನಗಳ ಒಳಗಾಗಿ ನೀಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಆದೇಶ ಹೊರಡಿಸಿದ್ದಾರೆ.

ಶ್ರೀಗಂಧದ ಮರ ಲೂಟಿಗೆ ಸಂಬಂಧಿಸಿದಂತೆ ಖುದ್ದು ಪ್ರಾಥಮಿಕ ತನಿಖೆ ನಡೆಸಿದ ಏಡುಕೊಂಡಲು ಅವರು, ಮರಗಳನ್ನು ಕಡಿದು ಕೇವಲ 5ರಿಂದ 6 ದಿನಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮರದ ಬುಡ ಮುಚ್ಚಿದರು: ತಾಳುಬೆಟ್ಟದಿಂದ ಶ್ರೀಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯ 2ನೇ ತಿರುವಿನಲ್ಲಿ ಎರಡು ಮರ ಕಡಿಯಲು ಯತ್ನ, 3, 5, 6 ಹಾಗೂ 9ನೇ ತಿರುವಿನಲ್ಲಿ ಶ್ರೀಗಂಧದ ಮರಗಳನ್ನು ಕಡಿಯಲಾಗಿದೆ. ರಸ್ತೆಬದಿ ಕಡಿದಿರುವ ಮರಗಳ ಬುಡಗಳನ್ನು ಕಲ್ಲು ಮತ್ತು ಮಣ್ಣಿನಿಂದ ಮುಚ್ಚಿದ್ದು, ಮರಗಳ ರೆಂಬೆ, ಕೊಂಬೆಗಳನ್ನು ರಸ್ತೆಯ ಹಳ್ಳದ ಕೆಳಗೆ ಮುಚ್ಚಿಟ್ಟಿರುವುದು ತನಿಖೆ ವೇಳೆ ಖಚಿತವಾಗಿದೆ. ಮರಗಳನ್ನು ಕಡಿದ ವೇಳೆ ಅಲ್ಲೇ ಬಿಟ್ಟು ಹೋಗಿದ್ದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಏಡುಕೊಂಡಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net