

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಕಪು್ಪಚುಕ್ಕೆಯಾಗಿ ಪರಿಣಮಿಸಿರುವ 545 ಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳ ಪೂರ್ವಾಪರ ಪರಿಶೀಲಿಸಲು ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಏತನ್ಮಧ್ಯೆ ನೇಮಕಾತಿ ಪ್ರಕ್ರಿಯೆಯಲ್ಲಿ ನೊಂದ ಅಭ್ಯರ್ಥಿಗಳು ಏ.20ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ವನಿಸಿದ್ದಾರೆ.
ಯಾವುದೇ ನಿರ್ಧಾರವಿಲ್ಲ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವರು, ಪ್ರತಿಯೊಬ್ಬ ಅಭ್ಯರ್ಥಿಗಳ ಪೂರ್ವಾಪರ ಪರಿಶೀಲನೆಗೆ ಸೂಚಿಸಿದ್ದಾರೆ. ತನಿಖೆ ಪೂರ್ಣಗೊಂಡು ಸಿಐಡಿ ಅಂತಿಮ ವರದಿ ನೀಡುವವರೆಗೂ 545 ಎಸ್ಐ ಹುದ್ದೆ ನೇಮಕಾತಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನೈಜ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಸಹಾಯಕ ಸಿಬ್ಬಂದಿ ಯಾರೇ ಅಕ್ರಮದಲ್ಲಿ ಭಾಗಿಯಾಗಿದ್ದರೂ ಬಿಡುವುದಿಲ್ಲ ಎಂದು ಪ್ರವೀಣ್ ಸೂದ್ ಭರವಸೆ ನೀಡಿದ್ದಾರೆ.
ಈ ಬೆಳವಣಿಗೆಯಿಂದಾಗಿ ವಾಮಮಾರ್ಗದಲ್ಲಿ ಖಾಕಿ ಧರಿ ಸಲು ಹೊರಟಿದ್ದ ಅಭ್ಯರ್ಥಿಗಳಿಗೆ ನಡುಕ ಶುರುವಾಗಿದ್ದರೆ, ಅಕ್ರಮಕ್ಕೆ ಸಾಥ್ ಕೊಟ್ಟಿರುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ.
ಸದ್ಯಕ್ಕಿಲ್ಲ ನೇಮಕಾತಿ: ದೇಹದಾರ್ಢ್ಯ ಪರೀಕ್ಷೆ ಮುಗಿಸಿ ಲಿಖಿತ ಪರೀಕ್ಷೆಗೆ ಕಾಯುತ್ತಿರುವ 402 ಎಸ್ಐ ಹುದ್ದೆಗಳ ನೇಮಕಾತಿ ಸದ್ಯಕ್ಕೆ ನಡೆಯುವ ಲಕ್ಷಣ ಕಾಣುತ್ತಿಲ್ಲ. 545 ಎಸ್ಐ ನೇಮಕಾತಿ ಅಕ್ರಮ ಕುರಿತು ಸಿಐಡಿ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಮೇಲೆ ನಿರ್ಧರ ತೆಗೆದುಕೊಳ್ಳಲಾಗುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಜಾಲತಾಣದಲ್ಲಿ ಗುದ್ದಾಟ: ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳು ವಾಮಮಾರ್ಗ ದಲ್ಲಿ ಎಸ್ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ ಎಂದು ಗೊತ್ತಾದ ಕೂಡಲೇ ನೊಂದ ಅಭ್ಯರ್ಥಿಗಳು, ಟೆಲಿಗ್ರಾಂ, ವಾಟ್ಸ್ಆಪ್, ಫೇಸ್ಬುಕ್ನಲ್ಲಿ ಗ್ರೂಪ್ ಮಾಡಿಕೊಂಡು ಆಯ್ಕೆಯಾದ ಅಭ್ಯರ್ಥಿಗಳ ಫೋಟೋ, ನೋಂದಣಿ ಸಂಖ್ಯೆ, ವೈಯಕ್ತಿಕ ಮಾಹಿತಿ ಹಾಕಿ ನಿಂದಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮತ್ತು ನೇಮಕಾತಿ ವಿಭಾಗದ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಒಂದೊಂದಾಗಿ ಅಕ್ರಮವನ್ನು ಬಯಲಿಗೆ ಎಳೆಯುತ್ತಿದ್ದಾರೆ. ಇದರ ಜತೆಗೆ ಪೊಲೀಸ್ ಇಲಾಖೆ ಮೇಲಿನ ಗೌರವಕ್ಕೂ ಧಕ್ಕೆ ಉಂಟಾಗುತ್ತಿದೆ.
ಸಮವಸ್ತ್ರದಲ್ಲಿ ಅಭ್ಯರ್ಥಿ!: ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾ ಗಿದ್ದ ಅಭ್ಯರ್ಥಿಯೊಬ್ಬ ನೇಮಕಾತಿ ಆದೇಶ ಪ್ರತಿ ಕೈಗೆ ಸಿಗುವ ಮುನ್ನವೇ ಸಮವಸ್ತ್ರ ಧರಿಸಿ ಫೋಟೋ ಶೂಟ್ ಮಾಡಿಸಿರುವುದು ಮತ್ತು ಆತನಿಗೆ ಗ್ರಾಮದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿರುವ ವಿಡಿಯೋ ಹಾಗೂ ಫೋಟೋ ಟ್ರೋಲ್ ಆಗುತ್ತಿವೆ. ಇದೇ ರೀತಿ ಆಯ್ಕೆಯಾದ ಯುವಕ, ಯುವತಿಯರ, ಕುಟುಂಬದ ಫೋಟೋಗಳು ವೈರಲ್ ಮಾಡಿ ನಿಂದನೆ ಮಾಡುತ್ತಿರುವುದು ಕಂಡುಬಂದಿದೆ.
ನೇಮಕಾತಿಗೆ ಧಕ್ಕೆ: 545 ಎಸ್ಐ ನೇಮಕಾತಿ ಸಂಬಂಧ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳ ನಡುವೆ ದಿವಂಗತ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಫೋಟೋಗಳನ್ನು ಯುವಕರು ಡಿಪಿಗೆ ಬಳಸಿ ಪೊಲೀಸ್ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಯುವಂತೆ ಒತ್ತಾಯಿಸಿದ್ದಾರೆ. ನೇಮಕಾತಿ ವಿಭಾಗದ ಮೇಲಿನ ಗೌರವಕ್ಕೂ ಧಕ್ಕೆ ಉಂಟಾಗಿದ್ದು, ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹುಬ್ಬಳ್ಳಿ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆ ದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು. ಸರ್ಕಾರ ಇದನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ. ಇಲ್ಲಿ ನ್ಯಾಯ ಸಿಗುತ್ತದೆ ಎಂದು ನಂಬಬೇಡಿ. ಕೋರ್ಟ್ ಮೆಟ್ಟಿಲು ಹತ್ತಬೇಕು ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರರಾವ್ ಸಲಹೆ ನೀಡಿ ದ್ದಾರೆ. ಕೋರ್ಟ್ನಿಂದ ಒತ್ತಡ ಬಂದರೆ ಮಾತ್ರ ನ್ಯಾಯ ದೊರೆಯಲಿದೆ. ಇಲ್ಲವೆಂದರೆ ಅಧಿಕಾರಿಗಳ ಅಮಾನತು ನಾಟಕಗಳು ನಡೆಯುತ್ತವೆ ಎಂದು ಆರೋಪಿಸಿದ್ದಾರೆ.
ಮರುಪರೀಕ್ಷೆ ಕೂಗು: ಏ.20ರಂದು ಬೆಂಗಳೂರು, ಧಾರವಾಡ ಮತ್ತು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕೆಲ ಅಭ್ಯರ್ಥಿಗಳು ನಿರ್ಧರಿಸಿದ್ದಾರೆ. ಅದೇ ದಿವಸ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಲು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮರು ಲಿಖಿತ ಪರೀಕ್ಷೆಗೆ ಆಗ್ರಹಿಸಲಾಗುತ್ತದೆ. ಜತೆಗೆ ಅಕ್ರಮದಲ್ಲಿ ತೊಡಗಿರುವ ಅಭ್ಯರ್ಥಿ ಗಳು, ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಲು ತೀರ್ವನಿಸಿದ್ದಾರೆ.
ಬಿಜೆಪಿ ನಾಯಕಿಗೆ ಸೇರಿದ ಸಂಸ್ಥೆ: ಜಿಡಿಎ ಬಡಾವಣೆ ಗೋಕುಲ್ ನಗರದಲ್ಲಿರುವ ಜ್ಞಾನಜ್ಯೋತಿ ಸ್ಕೂಲ್ ಕೇಂದ್ರದಲ್ಲೇ ಬಂಧಿತರೆಲ್ಲ ಪರೀಕ್ಷೆ ಬರೆದಿರುವುದು ಗಮನಾರ್ಹ. ಬಿಜೆಪಿ ಪ್ರಭಾವಿ ನಾಯಕಿ ದಿವ್ಯಾ ಹಾಗರಿಗೆ ಸೇರಿದ ಸಂಸ್ಥೆ ಇದಾಗಿರುವ ಕಾರಣ ಅನು ಮಾನದ ಹುತ್ತಕ್ಕೆ ದಿನಕ್ಕೊಂದು ರೆಕ್ಕೆಪುಕ್ಕ ಬರುತ್ತಿವೆ.