Bengaluru Traffic: ಬೆಂಗಳೂರು ಅಂದ್ರೆ ಲಕ್ಷಾಂತರ ಜನರ ಕನಸಿನ ನಗರ. ಒಳ್ಳೆ ಕೆಲಸ, ಭವಿಷ್ಯ ಮತ್ತು ಲೈಫ್‌ಸ್ಟೈಲ್ ಕೊಟ್ಟಿರೋ ಈ ಮಾಯಾನಗರಿ, ಹೊಟ್ಟೆಪಾಡಿಗೆ ಬಂದ ಪ್ರತಿಯೊಬ್ಬರಿಗೂ ಆಸರೆ ನೀಡಿದೆ. ಆದರೆ, ಈ ಸಿಟಿಯಲ್ಲಿ ದಿನಾ ಬದುಕೋದೇ ಒಂದು ಸಾಹಸವಾದರೆ, ಇನ್ನು ಹಬ್ಬದ ಟೈಮ್‌ನಲ್ಲಿ ಊರಿಗೆ ಹೋಗೋದು ಅದಕ್ಕಿಂತ ದೊಡ್ಡ ಸಾಧನೆ. ದಸರಾ-ದೀಪಾವಳಿ ಸಮಯದಲ್ಲಿ ಬಸ್, ಟ್ರಾಫಿಕ್ ರಶ್ ನಡುವೆ ಹೆಗೋ ಊರು ಸೇರಿದರೆ ಸಾಕು ಅನಿಸೋದು ಮಾತ್ರ ನೂರಕ್ಕೆ ನೂರರಷ್ಟು ನಿಜ.
ದೀಪಾವಳಿ ಸಾಲು ಸಾಲು ರಜೆ ಸಿಗ್ತಿದ್ದ ಹಾಗೆ, ಸಿಟಿಯ ಪ್ರಮುಖ ಎಕ್ಸಿಟ್ ಪಾಯಿಂಟ್‌ಗಳಾದ ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ಸ್ಟ್ಯಾಂಡ್, ಗೊರಗುಂಟೆಪಾಳ್ಯ, ಕೆಆರ್ ಪುರಂ ಮತ್ತು ನೈಸ್ ರೋಡ್‌ಗಳಲ್ಲಿ ಗಾಡಿಗಳದ್ದೇ ಸಾಲು. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕೋದು, ಖಾಸಗಿ ಬಸ್‌ಗಳಿಗೆ ಡಬಲ್ ದರ ತೆರೋದು ಮತ್ತು ಬಸ್‌ಗಾಗಿ ಗಂಟೆಗಟ್ಟಲೆ ಕಾಯೋದು ಪ್ರತಿಯೊಬ್ಬ ಪ್ರಯಾಣಿಕನಿಗೂ ದೊಡ್ಡ ತಲೆನೋವು.
ವಾರವಿಡೀ ಲ್ಯಾಪ್‌ಟಾಪ್ ಮುಂದೆ ಕುಳಿತು ಡೆಡ್‌ಲೈನ್‌ಗಳ ಜೊತೆ ರೋಬೋಟ್ ತರ ಬದುಕೋ ಟೆಕ್ಕಿಗಳಿಗೆ ಮತ್ತು ಉದ್ಯೋಗಿಗಳಿಗೆ ಹಬ್ಬದ ದಿನಗಳಲ್ಲಿ ಊರಿನ ಮನೆಯೊಂದೇ ಕಣ್ಣಿಗೆ ಕಾಣೋದು. ಮನೆ ಅಂಗಳದಲ್ಲಿ ಹಚ್ಚೋ ಸಾಲು ಸಾಲು ಹಣತೆ ಬೆಳಕು, ಹಬ್ಬದ ಅಡುಗೆಯ ಸುವಾಸನೆ ಮತ್ತು ಬಾಲ್ಯದ ಗೆಳೆಯರ ಜೊತೆಗಿನ ನಗು-ಮಾತುಗಳು ಸಿಟಿಯಲ್ಲಿ ಅನುಭವಿಸಿದ ಎಲ್ಲಾ ಕಷ್ಟಗಳನ್ನೂ ಮರೆಸಿಬಿಡುತ್ತವೆ.
ಬೆಂಗಳೂರು ಎಲ್ಲರಿಗೂ ಆಸರೆ ಕೊಟ್ಟಿರಬಹುದು, ಇಲ್ಲಿನ ವೆದರ್ ಮತ್ತು ಆಫರ್ ಮಾಡುವ ಅವಕಾಶಗಳು ಪ್ರತಿಯೊಬ್ಬರನ್ನೂ ಪ್ರೀತಿಸುವಂತೆ ಮಾಡುತ್ತವೆ. ಆದರೆ ಹಬ್ಬ ಬಂದಾಗ ಊರಿನ ಮಣ್ಣಿನ ವಾಸನೆ ಮತ್ತು ಅಮ್ಮನ ಮಡಿಲಿಗೆ ಸೇರೋ ಕಾತುರವೇ ಗೆಲ್ಲೋದು. ಸಿಟಿಯ ಜಂಜಾಟದಿಂದ ಕೊಂಚ ಬ್ರೇಕ್ ತಗೊಂಡು ಊರಿನ ಶಾಂತ ವಾತಾವರಣದಲ್ಲಿ ಕಳೆಯುವ ಕೆಲವು ದಿನಗಳು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತವೆ.
ಎಷ್ಟೇ ಸರ್ಕಸ್ ಮಾಡಿ, ಟ್ರಾಫಿಕ್ ದಾಟಿ ಮನೆ ತಲುಪಿದಾಗ ಸಿಗುವ ನೆಮ್ಮದಿಗೆ ಪ್ರಪಂಚದ ಯಾವ ಐಷಾರಾಮಿ ಜೀವನಕ್ಕೂ ಕಡಿಮೆ ಇಲ್ಲ. ಒಟ್ಟಾರೆ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.