ರಾಜೀವ್ ಅವರನ್ನು ಪ್ರಧಾನಿಯಾಗಬೇಡಿ ಎಂದಿದ್ದರಂತೆ ಸೋನಿಯಾ ಗಾಂಧಿ
‘ಅವರು ನಿಮ್ಮನ್ನೂ ಕೊಲ್ಲುತ್ತಾರೆ, ಮಕ್ಕಳಿದ್ದಾರೆ’ ಎಂದು ಕಣ್ಣೀರಿಟ್ಟ ಸೋನಿಯಾ
ಇಂದಿರಾ ಗಾಂಧಿ ಹತ್ಯೆಯಾದಾಗ ಪಶ್ಚಿಮ ಬಂಗಾಳದಲ್ಲಿದ್ದ ರಾಜೀವ್ ಗಾಂಧಿ
‘ಅವರು ಹೇಗಿದ್ದರೂ ನನ್ನನ್ನು ಕೊಲ್ಲುತ್ತಾರೆ’ ಎಂದು ಉತ್ತರಿಸಿದ್ದ ರಾಜೀವ್
Sonia Gandhi memoirs: 1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ, ರಾಜೀವ್ ಗಾಂಧಿ ಅವರು ದೇಶದ ಪ್ರಧಾನಿಯಾಗುವುದು ಸೋನಿಯಾ ಗಾಂಧಿ ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. 'ದಿ ಗಾರ್ಡಿಯನ್' ಪತ್ರಿಕೆಯಲ್ಲಿ ಪ್ರಕಟವಾಗಿರುವ ತಮ್ಮ ಪುಸ್ತಕದ ಆಯ್ದ ಭಾಗದಲ್ಲಿ, ಸೋನಿಯಾ ಗಾಂಧಿ ಅಂದಿನ ಆ ನೋವಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಇಂದಿರಾ ಗಾಂಧಿ ಅವರಿಗೆ ಗುಂಡು ಹಾರಿಸಿದಾಗ ರಾಜೀವ್ ಗಾಂಧಿ ಅವರು ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಭೆಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ನವದೆಹಲಿಗೆ ಹೊರಟ ಅವರು, ಮಧ್ಯಾಹ್ನ 3.30ರ ವೇಳೆಗೆ ದೆಹಲಿ ತಲುಪಿ ನೇರವಾಗಿ ಆಸ್ಪತ್ರೆಗೆ ಬಂದರು.
ಆಸ್ಪತ್ರೆಯಲ್ಲಿ ರಾಜೀವ್ ಅವರನ್ನ ನೋಡಿದಾಗ ಸೋನಿಯಾ ತೀವ್ರ ನೋವಿನಲ್ಲಿದ್ದರು. ‘ನಾವು ಪರಸ್ಪರ ಅಪ್ಪಿಕೊಂಡೆವು. ಆಗ ರಾಜೀವ್, 'ನನ್ನನ್ನು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಕೇಳುತ್ತಿದ್ದಾರೆ' ಎಂದು ಹೇಳಿದರು. ಆ ಮಾತು ಕೇಳಿ ನನ್ನ ಎದೆಗೆ ಚಾಕು ಇರಿದಂತಾಯಿತು’ ಎಂದು ಸೋನಿಯಾ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ರಾಜೀವ್ ಪ್ರಧಾನಿಯಾದರೆ ಅವರ ಜೀವಕ್ಕೂ ಅಪಾಯವಿದೆ ಎಂದು ಹೆದರಿದ ಸೋನಿಯಾ, ‘ಇಲ್ಲ, ನೀವು ಈ ಬಗ್ಗೆ ಯೋಚನೆಯೇ ಮಾಡಬೇಡಿ. ಮಕ್ಕಳಿಗಾಗಿ, ನಿಮಗಾಗಿ ಇದನ್ನು ಬೇಡ ಎನ್ನಿ. ಅವರು ನಿಮ್ಮನ್ನೂ ಕೊಂದುಹಾಕುತ್ತಾರೆ. ಎಂದು ಕೈಮುಗಿದು ಅಳುತ್ತಾ ಬೇಡಿಕೊಂಡಿದ್ದರು. ಆದರೆ ಅದಕ್ಕೆ ರಾಜೀವ್, ‘ಅವರು ಹೇಗಿದ್ದರೂ ನನ್ನನ್ನು ಕೊಲ್ಲುತ್ತಾರೆ’ ಎಂದು ಧೈರ್ಯದಿಂದ ಹೇಳಿ ಆ ಹುದ್ದೆಯನ್ನು ಒಪ್ಪಿಕೊಂಡಿದ್ದರು.