

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಕಾರ್ಯಕ್ರಮಗಳ ಭಾಗವಾಗಿ ರಾಜ್ಯ ಸರ್ಕಾರ ಇದೇ ಶೈಕ್ಷಣಿಕ ಸಾಲಿನಿಂದ (2025-26) ಅನ್ವಯವಾಗುವಂತೆ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಬೋಧಿಸುತ್ತಿರುವ ಕನ್ನಡ ಮಾಧ್ಯಮದ ಜತೆಯಲ್ಲೇ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಆರಂಭಿಸಲು ಆದೇಶ ಹೊರಡಿಸಿದೆ.
2025-26ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದಂತೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಈ ವರ್ಷ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ 2019-20ನೇ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಯಿತು. 2024-25ನೇ ಸಾಲಿನಲ್ಲಿ 1,792 ಶಾಲೆಗಳಿಗೆ ಆಂಗ್ಲ ಮಾಧ್ಯಮ ತರಗತಿಗಳಿಗೆ ಅನುಮತಿ ನೀಡಿರುವುದು ಸೇರಿ ಇಲ್ಲಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿಎಂಶ್ರೀ ಶಾಲೆಗಳು ಸೇರಿ ಒಟ್ಟು 4,404 ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಆರಂಭಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 1,465 ಶಾಲೆಗಳಿವೆ.
ಪ್ರೌಢಶಾಲೆಯಲ್ಲೂ ಆಂಗ್ಲ ಮಾಧ್ಯಮ: ವಿದ್ಯಾರ್ಥಿ ಗಳಲ್ಲಿ ಮಾತೃಭಾಷೆಯ ಜತೆಗೆ ಆಂಗ್ಲ ಭಾಷೆಯ ಕೌಶಲ ಬೆಳೆಸಲು ಆರಂಭಿಸಲಾಗುತ್ತಿದೆ.