

ವಾರಂಗಲ್: ಸ್ನೇಹಿತನೊಬ್ಬ ಮಾಡಿದ ಎಡವಟ್ಟಿಗೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ. ಹಿರಿಯ ವಿದ್ಯಾರ್ಥಿಯ ಕಿರುಕುಳ ಸಹಿಸಲಾರದೇ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಬೆನ್ನಲ್ಲೇ ಈ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೃತಳನ್ನು ರಕ್ಷಿತಾ (20) ಎಂದು ಗುರುತಿಸಲಾಗಿದೆ. ಈಕೆ ಭೂಪಲಪಲ್ಲಿ ಜಿಲ್ಲೆಯ ನಿವಾಸಿ. ವಾರಂಗಲ್ ಜಿಲ್ಲೆಯ ನರಸಂಪೇಟ ಉಪನಗರದ ಮುಗ್ಧಂಪುರಂನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯಾಗಿದ್ದಳು.
ಮಗಳು ಕಾಣುತ್ತಿಲ್ಲ ಅಂತ ಫೆ. 22ರಂದು ರಕ್ಷಿತಾಳ ತಂದೆ ಶಂಕರಾಚಾರಿ ದೂರು ದಾಖಲಿಸಿದ್ದರು. ಇದಾದ ಎರಡು ದಿನಗಳಲ್ಲೇ ರಕ್ಷಿತಾ ಪತ್ತೆಯಾಗಿದ್ದಳು. ಬಳಿಕ ಆಕೆ ನಡೆದ ಘಟನೆಯನ್ನು ಪೊಲೀಸರ ಮುಂದೆ ವಿವರಿಸಿದಳು. ರಕ್ಷಿತಾ ಯುವಕನೊಬ್ಬನನ್ನು ಲವ್ ಮಾಡುತ್ತಿದ್ದಳು. ಅಲ್ಲದೆ, ಮತ್ತೊಬ್ಬ ಯುವಕನೊಂದಿಗೆ ಸ್ನೇಹ ಹೊಂದಿದ್ದಳು. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಆತನನ್ನು ನಂಬಿ ತನ್ನ ಪ್ರಿಯಕರ ಜೊತೆಯಿದ್ದ ಫೋಟೋಗಳನ್ನು ಸ್ನೇಹಿತನಿಗೆ ಕಳುಹಿಸಿದ್ದಳು. ಆಕೆಯ ಬಾಲ್ಯದ ಫೋಟೋಗಳು ಸಹ ಸ್ನೇಹಿತ ಬಳಿ ಇತ್ತು.
ಬಳಿಕ ಎಲ್ಲರನ್ನು ಠಾಣೆಗೆ ಕರೆಯಿಸಿ ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದರು. ಆದರೆ, ರಕ್ಷಿತಾ, ನಂಬಿಕೆ ದ್ರೋಹ ಮಾಡಿದ ಸ್ನೇಹಿತನೊಂದಿಗೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದಳು. ಬಳಿಕ ಸ್ನೇಹಿತ ಆಕೆಯ ಫೋಟೋಗಳನ್ನು ಬೇರೆಯವರೊಂದಿಗೆ ಹಂಚಿಕೊಂಡಿದ್ದನು. ಇದೇ ಸಂದರ್ಭದಲ್ಲಿ ಲವರ್ ಜೊತೆಗಿರುವ ಆಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದರಿಂದ ಮನನೊಂದ ರಕ್ಷಿತಾ, ವಾರಂಗಲ್ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಡೆತ್ನೋಟ್ ಬರೆದಿರುವ ರಕ್ಷಿತಾ, ಬಾಲ್ಯದ ಫೋಟೋಗಳನ್ನು ಶೇರ್ ಮಾಡುವ ಮೂಲಕ ನನ್ನನ್ನು ಅವಮಾನಿಸಿದರು ಎಂದು ಬರೆದಿದ್ದಾಳೆ. ಇದೀಗ ರಕ್ಷಿತಾ ಅವರ ಕುಟುಂಬ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)