

ಕಲಬುರಗಿ: ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದ ಮಗನನ್ನು ಬದುಕಿಸಿಕೊಳ್ಳಲು ಹೆತ್ತಮ್ಮ ಮತ್ತು ಸಹೋದರಿ ಪರಿತಪಿಸಿದ್ದು ಅಷ್ಟಿಷ್ಟಲ್ಲ. ಮನೆಮಗ ಸಾವಿನ ಕುಣಿಕೆಯಲ್ಲಿ ಒದ್ದಾಡುತ್ತಿರುವುದನ್ನ ಕಣ್ಣಾರೆ ಕಂಡ ಅಮ್ಮ-ಮಗಳು ಕೂಡಲೇ ನೇಣಿಗೆ ಬಳಸಿದ್ದ ಶಾಲ್ ಕತ್ತರಿಸಿದರೂ ಆತ ಅವರ ಮಡಿಲಲ್ಲೇ ಪಾಣಬಿಟ್ಟ ಹೃದಯವಿದ್ರಾವಕ ಘಟನೆ ಹೀರಾಪುರದ ಅರಳಿಕಟ್ಟೆ ಪ್ರದೇಶದಲ್ಲಿ ಸಂಭವಿಸಿದೆ.
ಹೀರಾಪುರದ ಅರಳಿಕಟ್ಟೆ ಪ್ರದೇಶದ ಮನೆಯೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವಿಣಕುಮಾರ ಕೋಳಕರ್(21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರವೀಣಕುಮಾರ ಕೋಳಕರ್ ಬಿಇ ಅಂತಿಮ ವರ್ಷ ಓದುತ್ತಿದ್ದ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಪರೀಕ್ಷೆ ನಡೆದಿರಲಿಲ್ಲ. ತಂದೆ ನಾಗೇಂದ್ರ ಕೆಎಸ್ಆರ್ಪಿ ಪೇದೆ. ಗುರುವಾರ ತಂದೆ ಕೆಲಸಕ್ಕೆ ಹೋದಾಗ ಮನೆಯಲ್ಲಿ ತಾಯಿ ಮತ್ತು ಅಕ್ಕ ಇದ್ದರು. ಈ ವೇಳೆ ಶಾಲ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ.
ಎಷ್ಟೊತ್ತಾದರೂ ಕೋಣೆಯಿಂದ ಪ್ರವೀಣ್ ಹೊರ ಬರದಿದ್ದರಿಂದ ಅನುಮಾನಗೊಂಡು ಬಾಗಿಲು ತೆರೆದಾಗ ನೇಣಿಗೆ ಕೊರಳೊಡ್ಡಿರುವುದು ಕಂಡು ಬಂದಿದೆ. ಗಾಬರಿಗೊಂಡ ಅಕ್ಕ ಮತ್ತು ಅವ್ವ, ಶಾಲು ಕತ್ತರಿಸಿ ಪ್ರವೀಣ್ನನ್ನು ಕೆಳಗಿಳಿಸಿ ಮಡಿಲಲ್ಲಿ ಹಾಕಿಕೊಂಡ ಕೆಲ ಸೆಕೆಂಡ್ಗಳಲ್ಲೇ ಉಸಿರಾಟ ನಿಂತಿದೆ. ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಫಲ ನೀಡಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಇನ್ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ, ಎಎಸ್ಐ ಹಣಮಂತರಾಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪ್ರವೀಣ್ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರವೀಣ್ ನಾಲ್ವರು ಸಹೋದರಿಯರು ಮತ್ತು ಪಾಲಕರನ್ನು ಅಗಲಿದ್ದಾನೆ.