

ಅರಸೀಕೆರೆ: ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ವ್ಯಾಸಂಗದ ಜತೆಗೆ ಬರವಣಿಗೆ ಮೂಲಕ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅನಂತ ಇಂಟರ್ ನ್ಯಾಷನಲ್ ಶಾಲೆಯ ಚೇರ್ಮನ್ ಆರ್.ಅನಂತಕುಮಾರ್ ಹೇಳಿದರು.
ನಗರದ ಅನಂತ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಬೃಂದಾ ರಾಘವೇಂದ್ರ ಶರ್ಮಾ ಬರೆದಿರುವ ಇನ್ಫಿನಿಟಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಸರ್ವಾಂಗೀಣ ಬೆಳವಣಿಗೆ ಕಾಣಬೇಕು. ಓದಿನ ಜತೆಗೆ ಬರವಣಿಗೆ ಹವ್ಯಾಸ ರೂಢಿಸಿಕೊಂಡಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಬೆಟ್ಟದಪುರ ಗ್ರಾಮದ ರಾಘವೇಂದ್ರ ಸುಮಾರಾಣಿ ಪುತ್ರಿ ಶಾಲೆ, ಕಾಲೇಜಿನ ಕೌತುಕ ಸಂಗತಿಗಳ ಕುರಿತು ತನ್ನ ಕೃತಿ ಇನ್ಫಿನಿಟಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಕಲಿಕೆಯೊಂದಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು ಎಲ್ಲರಿಗೂ ಪ್ರೇರಣೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಸುರೇಶ್‌ಕುಮಾರ್ ಮಾತನಾಡಿ, ಇನ್ಫಿನಿಟಿ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದೆ. ಕಥಾ ಹಂದರ ಬಾಂಧವಿ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ. ಆಕೆ ಕುತೂಹಲಕಾರಿ ಹುಡುಗಿ. ರಹಸ್ಯಗಳು ಬಗೆಹರಿಯದೆ ಇರುವುದನ್ನು ಅವಳು ಇಷ್ಟಪಡುವುದಿಲ್ಲ. ಶಾಲೆಗೆ ಯಾವಾಗಲೂ ಬೀಗ ಹಾಕಲಾಗಿರುವ ಪಾಳುಬಿದ್ದ ಕೋಣೆಯಿದೆ ಎಂದು ತಿಳಿದಾಗ ಏನಾಗುತ್ತದೆ ಎಂಬಿತ್ಯಾದಿ ರೋಚಕ ಸಂಗತಿ ಒಳಗೊಂಡಿದ್ದು ಕೃತಿ ಕೊಂಡು ಓದಿದರೆ ಸ್ವಾರಸ್ಯ ತಿಳಿಯಲಿದೆ ಎಂದರು. ಸಿ.ಕೆ.ಮಂಜುನಾಥ್, ಸುಭಾಷ್, ಸುಮಾರಾಣಿ ರಾಘವೇಂದ್ರ, ಬೃಂದಾ ಆರ್.ಶರ್ಮಾ ಇನ್ನಿತರರು ಇದ್ದರು.