

ಬೆಂಗಳೂರು: ಲೋಕಸಭಾ ಚುನಾವಣೆ ಮತದಾನ ಮತ್ತು ಮತ ಏಣಿಕೆ ಹಿನ್ನೆಲೆಯಲ್ಲಿ ಏ. 24 ರಿಂದ 26 ಹಾಗೂ ಜೂ. 4 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಸೋಮವಾರ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಮಾರ್ಚ್ 16 ರಿಂದ ಜೂನ್ 4 ರ ವರೆಗೂ ಜಾರಿಯಲ್ಲಿ ಇದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾನ ಕೊನೆಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಜನತಾ ಪ್ರಾತಿನಿಧ್ಯ ಅಧಿನಿಯಮ ಕಾಯ್ದೆ 1951ರ ಕಲಂ 126 ರನ್ವಯ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಪಾಲಿಸಬೇಕಾಗಿದೆ.
ಮತದಾರರಿಗೆ ಆಸೆ, ಆಮಿಷಗಳಿಗೆ ಒಡಪಡಿಸುವುದು, ಬೆದರಿಸಲು ಯತ್ನಿಸುವುದು, ತಮ್ಮ ಪರವಾಗಿ ವರ್ತಿಸಲು ಪುಸಲಾಯಿಸುವುದು, ಮತಗಟ್ಟೆಗಳ ಹತ್ತಿರದಲ್ಲಿ ಪ್ರಚಾರ ಮಾಡುವುದು, ಸಾರ್ವಜನಿಕ ಸಭೆ ನಡೆಸುವುದು, ಮತದಾರರನ್ನು ವಿವಿಧ ಸಾರಿಗೆ ವ್ಯವಸ್ಥೆಗಳ ಮೂಲಕ ಮತಗಟ್ಟೆಗಳಲ್ಲಿ ಕರೆ ತರುವುದು, ಶಾಂತತೆಗೆ ಭಂಗ ಉಂಟು ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವುದನ್ನು ನಿಷೇಧಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು, ಮತದಾನದ ಪಾವಿತ್ರತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ (ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ) ನಿಷೇಧಾಜ್ಞೆ ಹೊರಡಿಸಲಾಗಿದೆ. ಏಪ್ರಿಲ್ 24ರ ಸಂಜೆ 6 ಗಂಟೆಯಿಂದ 26ರ ತಡರಾತ್ರಿ 12 ಗಂಟೆ ವರೆಗೆ ಹಾಗೂ ಜೂನ್ 4ರ ಬೆಳಗ್ಗೆ 6 ರಿಂದ ತಡರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶ ಹೊರಡಿಸಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಸಂಜೆ 5 ರಿಂದ 26ರ ತಡರಾತ್ರಿ 12 ಹಾಗೂ ಮತಎಣಿಕೆ ಪ್ರಯುಕ್ತ ಜೂನ್ 3ರ ತಡರಾತ್ರಿ 12 ರಿಂದ 4ರ ತಡರಾತ್ರಿ ವರೆಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.