ಕಾಂಗ್ರೆಸ್‌ನಲ್ಲಿ ಮುಗಿಯದ ಗೊಂದಲ: ಲಹರ್‌ಸಿಂಗ್ ವ್ಯಂಗ್ಯ | CM change fight

Lahar sing siroya
Published on

ಬೆಂಗಳೂರು: ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಎರಡೂವರೆ ವರ್ಷ ಕಳೆಯುವಷ್ಟರಲ್ಲಿ ಗೊಂದಲದ ಸುಳಿಗೆ ಸಿಲುಕಿದೆ. ‘ಸಿಎಂ ಬದಲಾವಣೆ’ ಚರ್ಚೆಗೆ ತೆರೆ ಎಳೆಯಬೇಕೆಂದು ಹೈಕಮಾಂಡ್‌ಗೆ ಹಿರಿಯ ಸಚಿವರಿಬ್ಬರು ಮೊರೆಯಿಟ್ಟಿರುವುದು ನಿದರ್ಶನ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಹಲವು ಹಗರಣಗಳು, ಅಕ್ರಮಗಳು, ವೈಲ್ಯಗಳನ್ನು ಕಂಡು ಮೌನಕ್ಕೆ ಶರಣಾದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಾನೆಷ್ಟು ದುರ್ಬಲವೆಂದು ತೋರಿಸಿಕೊಟ್ಟಿದೆ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ ನಾಯಕರ ‘ನಿಧಿ’ಗೆ ಕರ್ನಾಟಕವೇ ಸಂಪನ್ಮೂಲವಾಗಿದೆ. ಹೈಕಮಾಂಡ್‌ನ ಈ ದೌರ್ಬಲ್ಯ ಅರಿತ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮದೇ ಆದ ದಾಳ ಉರುಳಿಸುತ್ತಿದ್ದಾರೆ. ಮುಸುಕಿನ ಗುದ್ದಾಟ ನವೆಂಬರ್‌ಗೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ ಎಂದು ಲಹರ್‌ಸಿಂಗ್ ಸಿರೋಯ ತರ್ಕಿಸಿದ್ದಾರೆ.

ದಾಖಲೆ ಮುರಿಯುವುದು ಅನುಮಾನ

ನಾಯಕತ್ವ ಬದಲಾವಣೆ ಮಾತು ಹೊಸದೇನಲ್ಲ. ಅಧಿಕಾರಕ್ಕೆ ಬಂದಾಗಿನಿಂದಲೂ ಈ ಚರ್ಚೆ ನಡೆದಿದ್ದು, ‘ಪವರ್ ಶೇರಿಂಗ್’ ಒಪ್ಪಂದವಾಗಿರಬೇಕು ಎಂದು ಕಾಂಗ್ರೆಸ್‌ನ ಹಲವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈಗಿನ ಬೆಳವಣಿಗೆ ಗಮನಿಸಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಡಿ.ದೇವರಾಜ ಅರಸು ದಾಖಲೆ ಮುರಿಯುವುದು ಅನುಮಾನ ಎಂದಿದ್ದಾರೆ.

ಜಾತಿ ಜನಗಣತಿ ಬಗ್ಗೆ ಸಂಪುಟದಲ್ಲೇ ಅಪಸ್ವರ ವ್ಯಕ್ತವಾಗಿದೆ. ಹಲವು ಸಮುದಾಯಗಳು ತೀವ್ರ ಆಕ್ಷೇಪ ಎತ್ತಿವೆ. ಆದರೂ ರಾಹುಲ್ ಗಾಂಧಿಯವರನ್ನು ಮೆಚ್ಚಿಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಈ ಕಸರತ್ತಿಗೆ ಅಂಟಿಕೊಂಡಿದ್ದಾರೆ.

ರಾಜ್ಯದ ಅಭಿವೃದ್ಧಿ, ಉತ್ತಮ ಆಡಳಿತಕ್ಕಿಂತ ಬೇರೆಯದೇ ವಿಚಾರ ಆಡಳಿತ ಪಕ್ಷದ ಅಂಗಳದಲ್ಲಿ ಪ್ರಾಶಸ್ತ್ಯ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಜೋರಾಗುವ ಮುನ್ಸೂಚನೆಗಳು ಗೋಚರಿಸುತ್ತಿದ್ದು, ಸಿದ್ದರಾಮಯ್ಯ ಉರುಳಿಸುವ ದಾಳ ಕಾಂಗ್ರೆಸ್ ಪಕ್ಷಕ್ಕೆ ಮುಳುಗು ನೀರು ತರದಿರಲಿ ಎಂದು ಲಹರ್ ಸಿಂಗ್ ಸಿರೋಯ ಮಾರ್ಮಿಕವಾಗಿ ತಿವಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net