

ಬೆಂಗಳೂರು: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯಾದ್ಯಂತ ೯ ಜಿಲ್ಲೆಯ ೧೩ ಸರ್ಕಾರಿ ಅಧಿಕಾರಿಗಳ ಕಚೇರಿ, ಮನೆಗಳು ಹಾಗೂ ಅವರ ಸಂಬಂಧಿಕರ ನಿವಾಸಗಳು ಸೇರಿ ೬೮ ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರ ಎರಡು ದಿನದ ಪರಿಶೀಲನಾ ಕಾರ್ಯ ಬುಧವಾರ ರಾತ್ರಿ ಮುಕ್ತಾಯಗೊಂಡಿದೆ.
ಸುಮಾರು ೨೦೦ಕ್ಕೂ ಅಧಿಕ ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಕಲಬುರಗಿ, ಬೀದರ್, ಮೈಸೂರು, ಕೊಪ್ಪಳ, ಧಾರವಾಡ, ಬಳ್ಳಾರಿ ಜಿಲ್ಲೆಗಳ ವಿವಿಧೆಡೆ ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಭಾರೀ ಪ್ರಮಾಣದ ಅಕ್ರಮ ಆಸ್ತಿಗಳು ಪತ್ತೆಯಾಗಿವೆ.
೬೫.೮೪ ಕೋಟಿ ಮೌಲ್ಯದ ಆಸ್ತಿ ಪತ್ತೆ:
ದಾಳಿ ವೇಳೆ ಕೋಟ್ಯಂತರ ರೂ. ನಗದು, ಕೆ.ಜಿ.ಗಟ್ಟಲೆ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿಗಳು, ವಜ್ರದ ಆಭರಣಗಳು ಹಾಗೂ ದುಬಾರಿ ವಸ್ತುಗಳು ಸೇರಿ ಒಟ್ಟು ೬೫.೮೪ ಕೋಟಿ ರೂ. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಕಾರ್ಯಚರಣೆಯನ್ನು ಬುಧವಾರವು ಮುಂದುವರಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ಆರೋಪಿತ ಅಧಿಕಾರಿಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಕರೆದೊಯ್ದ ಖಾತೆ ಮತ್ತು ಲಾಕರ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಂಕ್ ಖಾತೆಯಲ್ಲಿಯೂ ಲಕ್ಷಾಂತರ ಹಣವಿರುವುದು ಮತ್ತು ಚಿನ್ನಾಭರಣ ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ನೋಟಿಸ್ ನೀಡಿ ವಿಚಾರಣೆ:
ಬೆಂಗಳೂರು, ಬೆಸ್ಕಾಂ ಇಇ ಎಚ್.ಡಿ.ಚೆನ್ನಕೇಶವ ಬಳಿ ೧೫.೫೩ ಕೋಟಿ ರೂ. ಮೌಲ್ಯದ ಆಸ್ತಿ, ರಾಮನಗರ ಜಿಲ್ಲೆ ಕಣಿಮಿಣಿಕೆ ಗ್ರಾಮದ ಕೆಎಂಎಫ್ ಮುಖ್ಯಕಾರ್ಯನಿರ್ವಾಹಕ (ಕಾರ್ಯದರ್ಶಿ) ಎಚ್.ಎಸ್.ಕೃಷ್ಣಮೂರ್ತಿ ಬಳಿ ೪.೦೯ ಕೋಟಿ ಮೌಲ್ಯದ ಆಸ್ತಿ, ಬೆಂಗಳೂರು ಬೆಸ್ಕಾಂ ಜಾಗೃತ ದಳದ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್.ಸುಧಾಕರ್ ರೆಡ್ಡಿ ಬಳಿ ಒಟ್ಟು ೫.೭೩ ಕೋಟಿ ರೂ. ಮೌಲ್ಯದ ಆಸ್ತಿ, ಹುಬ್ಬಳ್ಳಿ ನಗರ ಹೆಸ್ಕಾಂ ನಗರ ವಿಭಾಗೀಯ ಸ್ಟೋರ್‌ನ ನಿವೃತ್ತ ಕಿರಿಯ ಅಭಿಯಂತರ(ಗ್ರೇಡ್-೨) ಬಸವರಾಜ ಬಳಿ ಒಟ್ಟು ೪.೦೫ ಕೋಟಿ ರೂ. ಮೌಲ್ಯದ ಆಸ್ತಿ, ಮೈಸೂರಿನ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಎಂ.ಎಸ್.ಮಹದೇವಸ್ವಾಮಿ ಬಳಿ ೮.೪೧ ಕೋಟಿ ಆಸ್ತಿ, ಬೆಳಗಾವಿಯ ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ತಿಮ್ಮರಾಜಪ್ಪ ಬಳಿ ೯ ಕೋಟಿ ರೂ. ಆಸ್ತಿ, ರಾಮನಗರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎನ್.ಮುನೇಗೌಡ ಬಳಿ ೫ ಕೋಟಿ ರೂ.ಮೌಲ್ಯದ ಆಸ್ತಿ, ಬೀದರ್‌ನ ರಾಜ್ಯ ಪಶುವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಎಚ್.ಡಿ.ನಾರಾಯಣಸ್ವಾಮಿ ಬಳಿ ೮.೯೦ ಕೋಟಿ ರೂ. ಮೌಲ್ಯದ ಆಸ್ತಿ, ಬೀದರನ್ ಪಶು ವೈದ್ಯಕೀಯ ಮತ್ತು ಪಶು ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಲೆಕ್ಕ ಸಹಾಯಕ (ಹೊರಗುತ್ತಿಗೆ) ಸುನೀಲ್ ಕುಮಾರ್ ಬಳಿ ೧.೨೫ ಕೋಟಿ ರೂ. ಆಸ್ತಿ, ಕೊಪ್ಪಳದ ಆನೆಗುಂದಿ ವಿಭಾಗದ ಡಿಆರ್‌ಎಫ್‌ಓ ಬಿ.ಮಾರುತಿ ಬಳಿ ೨೧.೩೯ ಲಕ್ಷ ಆಸ್ತಿ, ಬಳ್ಳಾರಿ ಜಿಲ್ಲೆ ಗಣಿ ಮತ್ತು ಭೂಗರ್ಭ ವಿಭಾಗದ ಹಿರಿಯ ಭೂಗರ್ಭಶಾಸ್ತ್ರಜ್ಞ ಚಂದ್ರಶೇಖರ್ ಹಿರೇಮನಿ ಬಳಿ ೧೦.೭೨ ಲಕ್ಷ ಆಸ್ತಿ, ಯಾದಗಿರಿ ಸಿಟಿ ಮುನ್ಸಿಪಲ್ ಕೌನ್ಸಿಲ್ ಆಯುಕ್ತ ಶರಣಪ್ಪ ಬಳಿ ೨.೦೫ ಕೋಟಿ ರೂ. ಆಸ್ತಿ, ಯಾದಗಿರಿ ಜಿಲ್ಲೆ ಡಿಎಚ್‌ಒ ಡಾ.ಕೆ.ಪ್ರಭುಲಿಂಗ ಬಳಿ ೧.೪೯ ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ಆದಾಯಕ್ಕೂ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.