ಜನಸ್ವರಾಜ್ ಯಾತ್ರೆಗೆ ತೆರೆ: ಜನ ಬೆಂಬಲ, ಮೇಲ್ಮನೆಯಲ್ಲಿ ಮೇಲುಗೈಗೆ ಬಲ; ಪ್ರಯತ್ನ ಫಲಪ್ರದ

Jana swaraj
ಬೆಳಗಾವಿಯಲ್ಲಿ ಭಾನುವಾರ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಬಿ.ಶ್ರೀರಾಮುಲು, ಸಂಸದೆ ಮಂಗಲ ಅಂಗಡಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಇತರರಿದ್ದರು.
Published on

ಬೆಂಗಳೂರು: ಜನರ ಬಳಿಗೆ ತೆರಳಿ ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಗಳನ್ನು ವಿವರಿಸಿ, ವಿಶ್ವಾಸ ಗಳಿಸಿಕೊಂಡು ಭರವಸೆಗೆ ಒತ್ತಾಸೆ ನೀಡಲು ಉದ್ದೇಶಿತ ಆಡಳಿತ ಬಿಜೆಪಿ ‘ಜನಸ್ವರಾಜ್ ಯಾತ್ರೆ’ಗೆ ಭಾನುವಾರ ತೆರೆಬಿದ್ದಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ನಾಲ್ಕು ಪ್ರತ್ಯೇಕ ತಂಡಗಳು ರಾಜ್ಯ ಸುತ್ತಿವೆ. ನ.18ರಿಂದ 21ರವರೆಗೆ ಏಕಕಾಲಕ್ಕೆ ನಾಲ್ಕು ತಂಡಗಳ ಸಂಚಾರ ಪಕ್ಷದ ಒಳ-ಹೊರಗೆ ಸಂಚಲನ ಸೃಷ್ಟಿಸಿದ್ದು, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆಯಲಿರುವ ಚುನಾವಣೆ ಎದುರಿಸಲು ಭೂಮಿಕೆ ನಿರ್ವಿುಸಿಕೊಟ್ಟಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಕಮಲಪಡೆ ಸೈನಿಕರು ಸಲ್ಲಿಸಿದ ಸೇವೆ, ತೊಂದರೆಗೆ ಸಿಲುಕಿದ ಜನರಿಗೆ ನೀಡಿದ ನೆರವು ಆಪ್ತತೆ ಬೆಳೆಸಿದ್ದು, ಯಾತ್ರೆ ಉದ್ದೇಶ ಯಶಸ್ವಿಯಾಗಿದೆ ಎಂದು ಪಕ್ಷದ ಮೂಲಗಳು ಹರ್ಷ ವ್ಯಕ್ತಪಡಿಸಿವೆ.

ತಲುಪಿದ ಸಂದೇಶ: ಉತ್ತಮ ಆಡಳಿತ ಮತ್ತು ಜನಪರ ಕಾರ್ಯಕ್ರಮಗಳಿಗಾಗಿ ಮೇಲ್ಮನೆಯಲ್ಲೂ ಬಿಜೆಪಿ ಮೇಲುಗೈ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವೂ ಫಲಿಸಿದೆ. ಕೇಂದ್ರ, ರಾಜ್ಯ ಸರ್ಕಾರ ಕೊಟ್ಟ ಕಾರ್ಯಕ್ರಮಗಳ ಮನ-ಮನೆಗಳಿಗೆ ತಲುಪಿಸಲಾಗಿದೆ. ಗ್ರಾಪಂ ಚುನಾವಣೆ ಕಾಲಕ್ಕೆ ರೂಪಿಸಿದ ‘ಗ್ರಾಮಸ್ವರಾಜ್’ ಅಭಿಯಾನ ಯಶಸ್ಸಿನಿಂದ ಪ್ರೇರಣೆ ಪಡೆದು ಜನಸ್ವರಾಜ್ ಯಾತ್ರೆ ಕೈಗೊಳ್ಳಲಾಯಿತು.

ವಿಶ್ವಾಸ ಗಳಿಕೆ: ಪರಿಷತ್​ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಜನಪ್ರತಿನಿಧಿಗಳ ವಿಶ್ವಾಸ ಗಳಿಸಲಾಗಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್​ವರೆಗೆ ಏಕರೂಪದ ಮಾನ್ಯತೆ, ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಮೋದಿ ಒತ್ತಾಸೆ ಗ್ರಾಮೀಣ ಜನರಿಗೆ ಅರ್ಥವಾಗಿದೆ.

ಸಕಾರಾತ್ಮಕ ಸ್ಪಂದನೆ: ಸಾಧನೆಗಳನ್ನು ಹೇಳುವುದಷ್ಟೇ ಅಲ್ಲ, ಅಹವಾಲು ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದೆ. ಸಂಘಟನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ, ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಲಾಗಿದ್ದು, ಜನರ ಬೆಂಬಲ ಮೇಲ್ಮನೆ ಸಮರದಲ್ಲಿ ಮೇಲುಗೈ ಸಾಧಿಸುವ ಹಂಬಲಕ್ಕೆ ಬಲ ತುಂಬಿದೆ. ಬಿಜೆಪಿ ಚುನಾವಣಾ ರಾಜಕೀಯಕ್ಕೆ ಮಾತ್ರ ಸೀಮಿತವಲ್ಲ. ಜನರ ಕುಂದು-ಕೊರತೆಗಳಿಗೆ ಸ್ಪಂದನೆ ಹಾಗೂ ಸೇವೆ ಸಲ್ಲಿಸುವುದಕ್ಕೂ ಪ್ರಾಧಾನ್ಯತೆ ನೀಡುತ್ತದೆ. ಚುನಾವಣೆ ಬಂದಾಗ ಜನರ ಬಳಿಗೆ ಬರುವ ಪ್ರತಿಪಕ್ಷಗಳು ತಮ್ಮ ಹೊಣೆಗಾರಿಕೆ ನಿರ್ವಹಿಸುವಲ್ಲಿ ವಿಫಲವಾಗಿವೆ ಎಂಬುದು ಸಾಮಾನ್ಯ ಜನರಿಗೆ ಗೊತ್ತಾಗಿದೆ ಎಂದು ಮೂಲಗಳು ವಿಶ್ಲೇಷಿಸಿವೆ.

ಮುಖ್ಯಾಂಶಗಳು

  • ನಾಲ್ಕು ದಿನಗಳು, 30 ಜಿಲ್ಲೆಗಳಲ್ಲಿ ಸಮಾವೇಶ
  • ಜನಪ್ರತಿನಿಧಿಗಳು ಸೇರಿ ಸರಾಸರಿ 5,000 ಜನ ಭಾಗಿ
  • ಒಟ್ಟಾರೆ 1.50 ಲಕ್ಷ ಜನರನ್ನು ತಲುಪಿದ ಯಾತ್ರೆ ಸಂದೇಶ
  • ಗ್ರಾಮೀಣ ಜನರ ಮನಸೂರೆಗೊಂಡ ಕೇಂದ್ರದ ಉಪಕ್ರಮ
  • ಪ್ರಜಾತಂತ್ರದ ಬೇರು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ
  • ಅಹವಾಲುಗಳಿಗೆ ನೇರ ಸ್ಪಂದನೆ, ಯಾತ್ರೆಯ ಆಕರ್ಷಣೆ
  • ಜನಪ್ರತಿನಿಧಿಗಳು, ಕಾರ್ಯಕರ್ತರಲ್ಲಿ ಇಮ್ಮಡಿಸಿದ ವಿಶ್ವಾಸ
  • ಏಕಕಾಲಕ್ಕೆ ಸಂಚಾರ, ರಾಜಕೀಯ ರಂಗದಲ್ಲಿ ಸಂಚಲನ

ಬಿಜೆಪಿ ಬೆಂಬಲಿಸಲು ಜೆಡಿಎಸ್​ಗೆ ಮನವಿ

ಬೆಳಗಾವಿ/ಚಿಕ್ಕೋಡಿ: ವಿಧಾನಪರಿಷತ್ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡಿಲ್ಲವೋ ಅಂತಹ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಜನಸ್ವರಾಜ್ ಸಮಾವೇಶದಲ್ಲಿ ಭಾಗಿಯಾಗುವ ಮೊದಲು ವಿಧಾನಪರಿಷತ್ ಚುನಾವಣೆ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಫಾಮರ್್​ಹೌಸ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್​ವೈ, ರಾಜ್ಯದ 25 ಸ್ಥಾನಗಳ ಪೈಕಿ ಬಿಜೆಪಿ 20 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. 20ರಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಜೆಡಿಎಸ್ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.

ತಮಾಷೆಗೆ ಹೇಳಿದ್ದನ್ನು ನಿಜ ಮಾಡಿದ್ರು

ಮಂಡ್ಯ: ‘ಜೆಡಿಎಸ್ ನಾಯಕರು ನಾವು ಮಣ್ಣಿನ ಮಕ್ಕಳು ಎನ್ನುತ್ತಾರೆ. ನೀನು ನಿಜವಾದ ಮಣ್ಣಿನ ಮಗ ಆಗಿದ್ದರೆ ಎಚ್​ಡಿಕೆ ಸರ್ಕಾರ ತೆಗಿ’ ಎಂದು ತಮಾಷೆಗೆ ಹೇಳಿದ ಮಾತನ್ನು ಕೆ.ಸಿ.ನಾರಾಯಣಗೌಡ ನಿಜ ಮಾಡಿದರು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ತಮಾಷೆಗೆ ಹೇಳಿದ ಮಾತನ್ನು ನಿಜ ಮಾಡಿದ ನಾರಾಯಣಗೌಡ ನಮಗಿಂತ ಮುಂಚೆ ಬಾಂಬೆಗೆ ಹೋಗಿ ಕುಳಿತಿದ್ದರು. ಅಲ್ಲಿ ನಮ್ಮನ್ನೆಲ್ಲ ಬಹಳ ಚೆನ್ನಾಗಿ ನೋಡಿಕೊಂಡರು. ಬೆಳಗ್ಗೆ ತಿಂಡಿಗೆ ಇಡ್ಲಿ-ಕಾಲ್​ಸೂಪ್, ಮಧ್ಯಾಹ್ನ ಊಟಕ್ಕೆ ಮುದ್ದೆ- ತಲೆಮಾಂಸ. ನಾವು ಬಾಂಬೆಯಲ್ಲಿರುವುದನ್ನೇ ಮರೆತು ಬಿಟ್ಟಿದ್ದೆವು ಎಂದು ಸ್ಮರಿಸಿದರು. ನಾನು ಮಣ್ಣಿನ ಮಗ ಎನ್ನುವ ಎಚ್​ಡಿಕೆ, ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಅಥವಾ ಸಹಕಾರ ಖಾತೆ ಕೇಳ ಬೇಕಿತ್ತು. ಇಂಧನ, ಪಿಡಬ್ಲ್ಯುಡಿ ಮತ್ತು ಫೈನಾನ್ಸ್ ಏಕೆ ಕೇಳಿದರು ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net