

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಹುನಿರೀಕ್ಷಿತ ಕರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವುದರೊಂದಿಗೆ ಭಾರತ ಕರೊನಾ ಮುಕ್ತ ದೇಶವಾಗುವತ್ತ ಮೊದಲ ಹೆಜ್ಜೆ ಇರಿಸಿದೆ. ಕರ್ನಾಟಕದ 243 ಕೇಂದ್ರಗಳೂ ಸೇರಿದಂತೆ ದೇಶಾದ್ಯಂತ 3006 ಕೇಂದ್ರಗಳಲ್ಲಿ ಯಾವುದೇ ವಿಘ್ನ, ದೋಷಗಳಿಲ್ಲದಂತೆ 1.91 ಲಕ್ಷ ಮಂದಿಗೆ ಲಸಿಕೆ ಹಾಕಲಾಯಿತು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಇದು ಕರೊನಾ ಅಂತ್ಯದ ಆರಂಭ ಎಂದರು. ಯಾವುದೇ ವದಂತಿ ನಂಬದೆ ಭಾರತದ ಮೇಲೆ ವಿಶ್ವಾಸವಿಟ್ಟು ಲಸಿಕೆ ಪಡೆಯುವಂತೆ ದೇಶದ ಜನತೆಗೆ ಮನವಿ ಮಾಡಿದರು.
ಬೆಂಗಳೂರು: ಕರ್ನಾಟಕದಲ್ಲಿ ಮೊದಲ ದಿನವೇ ಶೇ. 62 ಮಂದಿ ಲಸಿಕೆ ಪಡೆದುಕೊಳ್ಳುವ ಮೂಲಕ ಅಭಿಯಾನ ಯಶಸ್ವಿಯಾಗಿದೆ. ರಾಜ್ಯದ 243 ಕೇಂದ್ರಗಳಲ್ಲಿ ನಡೆದ ಅಭಿಯಾನದಲ್ಲಿ ಆಸ್ಪತ್ರೆಗಳ ಸಿಬ್ಬಂದಿ ಲಸಿಕೆ ಪಡೆದರು. ಕೊಡಗು ಜಿಲ್ಲೆಯಲ್ಲಿ ಶೇ. 84, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ಮಂದಿ ಲಸಿಕೆ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 37 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಆಸ್ಪತ್ರೆ ಸೇರಿದಂತೆ ದೇಶಾದ್ಯಂತ ಏಕಕಾಲಕ್ಕೆ ನಡೆದ ಅಭಿಯಾನಕ್ಕೆ ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಬೆಂಗಳೂರಿನಿಂದ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಆರೋಗ್ಯ ಸಚಿವ ಡಾ. ಸುಧಾಕರ್ ಭಾಗವಹಿಸಿದ್ದರು. ವಿಕ್ಟೋರಿಯಾ ಆಸ್ಪತ್ರೆಯ ಕೆ. ನಾಗರತ್ನಾ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಮೊದಲಿಗರು. ಬಳಿಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಸೇರಿ ಕೆಲ ವೈದ್ಯರು ಲಸಿಕೆ ಪಡೆದುಕೊಂಡರು.