ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ

15 KRN-8
Published on

ಕೆ.ಆರ್.ನಗರ: ಪ್ರತಿಭಾ ಪುರಸ್ಕಾರ ಮಾಡುವುದರಿಂದ ವಿದ್ಯಾರ್ಥಿಗಳ ಸಾಧನೆಗೆ ಚಿಮ್ಮು ಹಲಗೆಯಾಗಿ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಅಭಿಪ್ರಾಯಪಟ್ಟರು.


ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ನಾಯಕರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೆ ಅದು ಸ್ಫೂರ್ತಿದಾಯಕವಾಗಲಿದ್ದು, ಇಂತಹ ಉತ್ತಮ ಕೆಲಸ ಮಾಡುವ ಸಂಘ-ಸಂಸ್ಥೆಗಳ ಜತೆಗೆ ಸಾರ್ವಜನಿಕರು ಸಹಾಯಹಸ್ತ ಚಾಚಿ ಬೆನ್ನೆಲುಬಾಗಿ ನಿಲ್ಲಬೇಕೆಂದು ಸಲಹೆ ನೀಡಿದರು.


ಶಿಕ್ಷಕರು ಮತ್ತು ಪಾಲಕರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡಬೇಕೆಂದರಲ್ಲದೆ, ಇಲ್ಲಿನ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ದೇವಾಲಯ ನಿರ್ಮಿಸಲು ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡುವುದರ ಜತೆಗೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುವ ಭರವಸೆ ನೀಡಿದ ಡಿ.ರವಿಶಂಕರ್, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ್ದಾಗ ನಾನು ಕ್ಷೇತ್ರದ 18 ಗ್ರಾಮಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಿಸಲು ಅನುದಾನ ಕೊಡಿಸಿದ್ದೆ ಎಂದು ತಿಳಿಸಿದರು.


ಮುಂದಿನ ತಿಂಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ತೆರಳುವ ನಾಯಕ ಸಮಾಜದವರಿಗೆ ಅಗತ್ಯವಿರುವ ಅನುಕೂಲಗಳನ್ನು ಒದಗಿಸುವುದರ ಜತೆಗೆ ನಾನೂ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುತ್ತೇನೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ತಾಲೂಕು ನಾಯಕ ಸಮಾಜದ ಅಧ್ಯಕ್ಷ ನರಸಿಂಹನಾಯಕ, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷೆ ಸೌಮ್ಯಾ ಶಿವಕುಮಾರ್, ತಂದ್ರೆ ಗ್ರಾಪಂ ಅಧ್ಯಕ್ಷೆ ರೇಣುಕಾ ವೆಂಕಟೇಶ್, ಸಮಾಜದ ಮುಖಂಡರಾದ ನಾಗರಾಜನಾಯಕ, ಪರಮೇಶ್, ಕೆ.ವಿ.ರಮೇಶ್, ಕೃಷ್ಣನಾಯಕ, ಸುರೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net