

ಬೆಂಗಳೂರು: ಮೀಸಲಾತಿಯನ್ನು ಕಿತ್ತುಕೊಂಡು ಮತಾಂತರ ಆದವರಿಗೆ ಕೊಡಬೇಕೆಂಬ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಹುನ್ನಾರ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಉತ್ತೇಜನವನ್ನು ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಹಿಂದು ಧರ್ಮ ಒಡೆಯುವ ದುರುದ್ದೇಶ ಇದರ ಹಿಂದಿದೆ ಎಂದು ದೂರಿದರು.
ಸೃಷ್ಟಿ ಮಾಡಿದ ಅನಧಿಕೃತ 48 ಜಾತಿಗಳನ್ನು ಸರಕಾರ ತಕ್ಷಣವೇ ಹಿಂದೆ ಪಡೆಯಬೇಕು ಎಂದು ಒತ್ತಾಯಿಸಿದರು. ಅದನ್ನು ಇತರರು ಕಾಲಂಗೆ ವರ್ಗಾಯಿಸಲು ಸಂವಿಧಾನ ಮತ್ತು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ. ಹಿಂದು ಜಾತಿ ಇಟ್ಟುಕೊಂಡು ಮತಾಂತರ ಆಗಲು ಯಾವುದೇ ರೀತಿಯಲ್ಲೂ ಅವಕಾಶವಿಲ್ಲ ಎಂದು ಪ್ರತಿಪಾದಿಸಿದರು.
ಭಂಡತನದಿಂದ ಇದನ್ನು ಸಮರ್ಥಿಸಿಕೊಂಡು ಮುಂದುವರೆಯುವುದನ್ನು ಸಂಪೂರ್ಣವಾಗಿ ಖಂಡಿಸುವುದಾಗಿ ಹೇಳಿದರು. ಜಾತಿ ಸಮೀಕ್ಷೆ ವಿಚಾರದಲ್ಲಿ ಆತುರ ಏಕೆ ?, ಕಾಂತರಾಜು ಆಯೋಗ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ದುಡ್ಡು ಖರ್ಚು ಮಾಡಿ, ಸಮಾಜದಲ್ಲಿ ಗೊಂದಲ ನಿರ್ಮಿಸಿದ್ದರು. ಒಂದು ಜಾತಿ ಮೇಲೆ ಇನ್ನೊಂದು ಜಾತಿಯನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದರು ಎಂದು ದೂಷಿಸಿದರು.
ಕಾಂಗ್ರೆಸ್ಸಿನವರು ಸಂವಿಧಾನದ ಬಗ್ಗೆ ಸದಾ ಪ್ರಸ್ತಾಪಿಸುತ್ತಾರೆ. ನಾವು ಸಂವಿಧಾನ ರಕ್ಷಕರು ಎನ್ನುತ್ತಾರೆ. ಸಂವಿಧಾನದಲ್ಲಿ ಜಾತಿ ಗಣತಿ ಮಾಡಲು ನಿಮಗೆ ಅವಕಾಶ- ಅಧಿಕಾರ ಎಲ್ಲಿದೆ ಎಂದು ಕೇಳಿದರು. ಮತ್ತೊಮ್ಮೆ ಸರ್ಕಾರದ ಹಣ ವ್ಯರ್ಥ ಮಾಡದಿರಿ.
ಪೂರ್ವಭಾವಿ ತಯಾರಿ ಮಾಡಿ; ಎಲ್ಲ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಟ್ಟು, ಎಲ್ಲ ರೀತಿಯ ಸಲಹೆ ಪಡೆದು ಮುಂದೆ ಹೋದರೆ ವೈಜ್ಞಾನಿಕವಾಗಿ ಮಾಡಬಹುದು ಎಂದು ಒತ್ತಾಯಿಸಿದರು.
ಸರ್ಕಾರ ಮನ ಬಂದಂತೆ ನಡೆದುಕೊಳ್ಳಬಾರದು; ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದರು. ಅಧಿಕಾರ ದುರ್ಬಳಕೆ ಮಾಡುವುದು ಖಂಡಿತ ಒಳ್ಳೆಯದಲ್ಲ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಇದ್ದರು.