ಸಹಕಾರ ಸಂಘಗಳಿಂದ ಮಹಿಳಾ ಸಬಲೀಕರಣ

skp sangha (1)
ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಸಿದ್ದಲಿಂಗ ಶ್ರೀಗಳು, ಚನ್ನಬಸವ ಶ್ರೀಗಳು, ರತ್ನಾ ಜಯಣ್ಣ, ನಿರ್ಮಲಾ ಜಯದೇವಪ್ಪ, ಎ.ಜಿ.ಅನಿತಾ, ಡಿ.ಎಲ್.ಬಸವರಾಜ್, ಚನ್ನವೀರಪ್ಪ ಇತರರಿದ್ದರು.
Published on

ಶಿಕಾರಿಪುರ: ಮಹಿಳಾ ದನಿ ಮತ್ತು ಸ್ವಾವಲಂಬನೆಯ ಪ್ರತೀಕವಾಗಿದ್ದವಳು ಅಕ್ಕಮಹಾದೇವಿ. 12ನೇ ಶತಮಾನದ ಶರಣರ ಹೋರಾಟದಲ್ಲಿ ಪ್ರಮುಖ ಶರಣೆಯಾಗಿದ್ದ ಅಕ್ಕನ ಹೆಸರಿನ ಈ ಪತ್ತಿನ ಸಹಕಾರ ಸಂಘ ಬೆಳ್ಳಿಹಬ್ಬ ಆಚರಿಸುತ್ತಿರುವುದು ಸಂತಸದ ವಿಚಾರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ದೊಡ್ಡಪೇಟೆಯ ಶ್ರೀ ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ಸಂಘದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಗಳಿಂದ ಬಡ ಮಹಿಳೆಯರಿಗೆ ಆರ್ಥಿಕ ಸಹಾಯ ದೊರೆತು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಯಾವುದೇ ಕೆಲಸಗಳನ್ನು ಮಾಡಿದರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇಂತಹ ಪತ್ತಿನ ಸಹಕಾರ ಸಂಘಗಳು, ಸ್ತ್ರೀಶಕ್ತಿ ಗುಂಪುಗಳು ಮತ್ತು ಸ್ವಸಹಾಯ ಸಂಘಗಳು ನೆರವಾಗುತ್ತವೆ ಎಂದು ತಿಳಿಸಿದರು.
ಕಾಳೇನಹಳ್ಳಿಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಸಹಕಾರ ಎನ್ನುವ ಶಬ್ದವೇ ಅನುಪಮ. ಅದೊಂದು ಭೀಮಬಲ. ಅಶಕ್ತರನ್ನು ಈ ಸಹಕಾರ ಕ್ಷೇತ್ರ ಒಂದಿಲ್ಲೊಂದು ರೀತಿಯಲ್ಲಿ ಕೈಹಿಡಿದು ಮೇಲೆತ್ತುತ್ತದೆ. ಸಂಘ 25 ವರ್ಷಗಳನ್ನು ಪೂರೈಸಿರುವುದು ಈ ಮಹಿಳೆಯರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.
ಸಹಕಾರ ಸಂಘದ ಅಧ್ಯಕ್ಷೆ ರತ್ನಾ ಜಯಣ್ಣ ಮಾತನಾಡಿ, 2500 ಷೇರುದಾರರನ್ನು ಹೊಂದಿರುವ ನಮ್ಮ ಸಂಘ 10 ಕೋಟಿ ರೂ.ಗೂ ಹೆಚ್ಚಿನ ಠೇವಣಿ ಬಂಡವಾಳ ಹೊಂದಿದೆ. ಈ ವರ್ಷ 5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಮಾಜಿ ಅಧ್ಯಕ್ಷ ಚನ್ನವೀರಪ್ಪ, ಸಂಘದ ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಯ ಯೋಜನಾಧಿಕಾರಿ ಅನಿತಾ, ಸಂಘದ ಉಪಾಧ್ಯಕ್ಷೆ ನಿರ್ಮಲಾ ಜಯದೇವಪ್ಪ, ಕಾರ್ಯದರ್ಶಿ ಮಹೇಶ್‌ಕುಮಾರ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net