

ಬೆಂಗಳೂರು: ಪೆರಿಫೆರಲ್ ವರ್ತಲ ರಸ್ತೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸರ್ಕಾರ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಕಲ್ಪಿಸುವ ಯೋಜನೆ ರೂಪಿಸಲು ಮುಂದಾಗಿದೆ. ಮತ್ತೊಂದೆಡೆ ಭೂಮಿಗೆ ಬದಲಾಗಿ ಅಭಿವೃದ್ಧಿಪಡಿಸಿರುವ ನಿವೇಶನ ಕೊಡುವಂತೆ ಭೂಮಿ ಕೊಡುವ ರೈತರು ಬಿಡಿಎಗೆ ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ರಸ್ತೆ ಯೋಜನೆಗೆ ಭೂಮಿ ಕಳೆದುಕೊಳ್ಳುವವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ನೀಡಬಹುದು ಎಂದು ಪಿಆರ್ಆರ್ ಪರಿಸರ ವರದಿಯಲ್ಲಿ ತಿಳಿಸಿದೆ. ರಸ್ತೆ ನಿರ್ವಣವಾದರೆ ಸುತ್ತಲಿನ ಪ್ರದೇಶದಲ್ಲಿ ಕೈಗಾರಿಕೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಐಟಿ ಕಂಪನಿಗಳು, ವಸತಿ ಬಡಾವಣೆಗಳು ತಲೆ ಎತ್ತಲಿವೆ. ಈ ಸಂಸ್ಥೆಗಳಲ್ಲಿ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಲು ನಿರ್ಧರಿಸಿದೆ. ರಸ್ತೆಯುದ್ದಕ್ಕೂ ನಿರ್ವಣಗೊಳ್ಳುವ ಟೌನ್ಶಿಪ್ ಹಾಗೂ ಕೈಗಾರಿಕಾ ವಲಯಗಳಿಗೆ ಮೂಲಸೌಕರ್ಯ ಕಲ್ಪಿಸುವ ವೇಳೆ ಹಲವು ಪರೋಕ್ಷ ಉದ್ಯೋಗಳು ಸೃಷ್ಟಿಯಾಗುತ್ತವೆ. ಅದರಲ್ಲೂ ಮೊದಲ ಆದ್ಯತೆ ಭೂಮಿ ಕಳೆದುಕೊಂಡ ಕುಟುಂಬದವರಿಗೆ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಮಾರುಕಟ್ಟೆಗಳ ನಿರ್ಮಾಣ
ಪೆರಿಫೆರಲ್ ವರ್ತಲ ರಸ್ತೆ ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಹಾದು ಹೋಗುವುದರಿಂದ ಹಲವು ಮಾರುಕಟ್ಟೆಗಳು ನಿರ್ವಣಗೊಳ್ಳಲಿವೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಮೀನಿಗೆ ಬದಲಾಗಿ ನಿವೇಶನ?
ಪೆರಿಫೆರಲ್ ವರ್ತಲ ರಸ್ತೆಗೆ ನೀಡುವ ಭೂಮಿಗೆ ಪರಿಹಾರವಾಗಿ ಬಿಡಿಎ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡುವಂತೆ ಆಯುಕ್ತರಿಗೆ ಈಗಾಗಲೇ ಪತ್ರ ಬರೆಯಲಾಗಿತ್ತು. ಆದರೆ, ಬಿಡಿಎ ಇದುವರೆಗೂ ಈ ಪತ್ರಕ್ಕೆ ಇನ್ನೂ ಉತ್ತರ ನೀಡಿಲ್ಲ ಎಂದು ರೈತ ಕೃಷ್ಣಪ್ಪ ನಾಗೇನಹಳ್ಳಿ ವಿಜಯವಾಣಿಗೆ ತಿಳಿಸಿದ್ದಾರೆ.
ಪಿಆರ್ಆರ್ ರಸ್ತೆಗೆ ಭೂಮಿ ನೀಡುವ ರೈತರಿಗೆ ಪರಿಹಾರವಾಗಿ ಹಣ ಹಾಗೂ ನಿವೇಶನ ನೀಡುವುದಾಗಿ ಬಿಡಿಎ ಅಧಿಕಾರಿಗಳು 2 ವರ್ಷದ ಹಿಂದೆ ತಿಳಿಸಿದ್ದರು. ಯೋಜನೆಗೆ ಒಂದು ಎಕರೆಗಿಂತ ಹೆಚ್ಚು ಜಮೀನು ನೀಡುವ ರೈತರಿಗೆ ಮಾತ್ರ ನಿವೇಶನ ನೀಡಿ ಅಲ್ಪ ಪ್ರಮಾಣದ ಭೂಮಿ ಕಳೆದುಕೊಳ್ಳುವವರಿಗೆ ಹಣದ ರೂಪದಲ್ಲಿ ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ರೈತರು ಒಪ್ಪದೆ ನಮಗೂ ಅಭಿವೃದ್ಧಿಪಡಿಸಿದ ನಿವೇಶನ ನೀಡುವಂತೆ ಆಗ್ರಹಿಸಿದ್ದರು.ನಂತರ ರೈತರು ಸಂಘಟನೆಯಾಗಿ ಬಿಡಿಎ ಆಯುಕ್ತರಿಗೆ ಪತ್ರ ಬರೆದು ಯೋಜನೆಗೆ ಜಮೀನು ನೀಡುವ ಎಲ್ಲ ರೈತರಿಗೂ ನಿವೇಶನ ನೀಡುವಂತೆ ಕೋರಿದ್ದರು. ಯೋಜನೆಗೆ ಜಮೀನು ನೀಡುವ ರೈತರಿಗೆ ಬಿಡಿಎ 2013ರ ಭೂಸ್ವಾಧೀನ ಕಾಯ್ದೆ ನಿಯಮದಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 1:2 ಹಾಗೂ ಬೇರೆ ಕಡೆ ಭೂಮಿ ವಶಪಡಿಸಿಕೊಂಡರೆ 1:4ರಂತೆ ಪರಿಹಾರ ನೀಡುತ್ತದೆ. ಆದರೆ ರೈತರು ಈ ಪರಿಹಾರಕ್ಕೆ ಒಪ್ಪದೆ ಅಭಿವೃದ್ಧಿಪಡಿಸಿದ ಬಿಡಿಎ ಜಾಗ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಬಿಡಿಎ ಹೇಳಿದಂತೆ ರಸ್ತೆ ನಿರ್ವಣಕ್ಕೆ ಭೂಮಿ ನೀಡುತ್ತಿದ್ದೇವೆ. ಪರಿಹಾರವಾಗಿ ನಮಗೆ ಹಣ ಬೇಡ ಬದಲಿಗೆ ಅಭಿವೃದ್ಧಿಪಡಿಸಿದ ನಿವೇಶನಬೇಕು. ಹಣ ಕೊಡಲು ಮುಂದಾದರೆ ಹೋರಾಟ ನಡೆಸುತ್ತೇವೆ. | ಕೃಷ್ಣಪ್ಪ ಯೋಜನೆಗೆ ಭೂಮಿ ನೀಡಿರುವ ರೈತ,ನಾಗೇನಹಳ್ಳಿ,
65.5 ಕಿ.ಮೀ.ಉದ್ದದ ರಸ್ತೆ
ಬಿಡಿಎ ನಿರ್ವಿುಸಲು ಉದ್ದೇಶಿಸಿರುವ ಪೆರಿಪೆರಲ್ ವರ್ತಲ ರಸ್ತೆ 65.5 ಕಿ.ಮೀ.ಉದ್ದ ಇರಲಿದೆ. ಈಗಿರುವ ನೈಸ್ ರಸ್ತೆಗೆ ಪರ್ಯಾಯವಾಗಿ ರಸ್ತೆ ನಿರ್ವಣಗೊಂಡು ವೃತ್ತಾಕಾರದ ರಸ್ತೆ ಜಾಲವನ್ನು ನಿರ್ವಿುಸಲಿದೆ. ರಸ್ತೆ 6 ಪಥ ಹೊಂದಿದ್ದು ಇದರಲ್ಲಿ 10.5 ಮೀ. ಅಗಲದ ಸರ್ವಿಸ್ ರಸ್ತೆಯನ್ನು ಹೊಂದಿದೆ. ಮೊದಲು 8 ಪಥದ ರಸ್ತೆ ನಿರ್ವಣಕ್ಕೆ ಯೋಜನೆ ತಯಾರಿಸಲಾಗಿತ್ತು. ಅಧಿಕ ಭೂಮಿ ಸ್ವಾಧೀನ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ 6 ಪಥಕ್ಕೆ ಇಳಿಸಲಾಯಿತು.
ಮಾಲಿನ್ಯ ತಡೆ ವ್ಯವಸ್ಥೆ ಅಳವಡಿಕೆ
ಪೆರಿಫೆರಲ್ ವರ್ತಲ ರಸ್ತೆ ನಿರ್ವಣದಿಂದ ವಾಯು ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂಬ ಆತಂಕವನ್ನು ಪರಿಸರ ಪ್ರೇಮಿಗಳು ಹಾಗೂ ಹೋರಾಟಗಾರರು ವ್ಯಕ್ತಪಡಿಸಿದ್ದರು. ಅಲ್ಲದೆ, ಹಸಿರು ನ್ಯಾಯಾಧಿಕರಣ ಕೆಲವು ಸೂಚನೆ ನೀಡಿ ಅನುಸರಿಸುವಂತೆ ಸೂಚಿಸಿತ್ತು. ಹೀಗಾಗಿ ಬಿಡಿಎ ಅಧಿಕಾರಿಗಳು ನ್ಯಾಯಮಂಡಳಿ ಸೂಚನೆಯಂತೆ ರಸ್ತೆಯ ಇಕ್ಕೆಲಗಳಲ್ಲಿ 5 ಮೀಟರ್ ವ್ಯಾಪ್ತಿಯಲ್ಲಿ ಗಿಡ ನೆಡುವುದು, 5,861 ಮರಗಳನ್ನು ಕತ್ತರಿಸದಿರುವುದು, ಸೂಕ್ಷ್ಮ ಪ್ರದೇಶದಲ್ಲಿ 3 ಹಂತಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ವಾಯುಮಾಲಿನ್ಯ ತಡೆಯಲು ನಿರ್ಧರಿಸಿದೆ. ಇದಕ್ಕಾಗಿ ಪರಿಸರ ತಜ್ಞರ ಸಮಿತಿ ರಚಿಸಲಾಗಿದೆ.