

ನವದೆಹಲಿ: ಆಮ್ ಆದ್ಮಿ ಪಾರ್ಟಿ(ಎಎಪಿ)ದ ನೇತಾರ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಉತ್ತರಾಖಂಡದ ಯುವಜನತೆಯ ವಿಶ್ವಾಸ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಪ್ರತ್ಯೇಕ ಸಚಿವಾಲಯವನ್ನೇ ಸೃಷ್ಟಿಸಿ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ರಾಜ್ಯದ ವಿಧಾನಸಭಾ ಚುನಾವಣೆಗಳ ಸಿದ್ಧತೆಗಾಗಿ ಇಂದು ಉತ್ತರಾಖಂಡದ ಹಲ್ದ್ವನಿಯಲ್ಲಿ ತಿರಂಗಾ ಸಂಕಲ್ಪ ಯಾತ್ರೆ ನಡೆಸಿದ ಕೇಜ್ರಿವಾಲ್, ತಮ್ಮ ಟ್ವಿಟರ್ ಖಾತೆಯಲ್ಲಿ ಅದರ ವಿವರಗಳನ್ನು ಶೇರ್ ಮಾಡಿದ್ದಾರೆ. ಜೊತೆಯಲ್ಲೇ, ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆಯಾದರೆ, ಅಲ್ಲಿನ ಜನರಿಗೆ 6 ಗ್ಯಾರಂಟಿಗಳನ್ನು ಕೊಡುತ್ತೇನೆ ಎಂದಿದ್ದಾರೆ.
ಪ್ರತಿಯೊಂದು ಮನೆಗೆ ಉದ್ಯೋಗ ನೀಡಲಾಗುವುದು ಅಥವಾ ಉದ್ಯೋಗ ಸಿಗುವವರೆಗೆ ತಿಂಗಳಿಗೆ 5 ಸಾವಿರ ರೂಪಾಯಿ ನೀಡಲಾಗುವುದು; ನೌಕರಿಗಳಲ್ಲಿ ಉತ್ತರಾಖಂಡದ ಜನರಿಗೆ ಶೇ.80 ರಷ್ಟು ಮೀಸಲಾತಿ ನೀಡಲಾಗುವುದು; 6 ತಿಂಗಳಲ್ಲಿ 1 ಲಕ್ಷ ಸರ್ಕಾರಿ ನೌಕರಿ ಸೃಷ್ಟಿ ಮಾಡಲಾಗುವುದು; ಖಾಸಗಿ ಕ್ಷೇತ್ರಗಳ ನೌಕರಿಗಳಿಗಾಗಿ ಜಾಬ್ ಪೋರ್ಟಲ್ ತೆರೆಯಲಾಗುವುದು; ಜನರು ಅನ್ಯರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಮತ್ತು ವಲಸೆ ಮಂತ್ರಾಲಯವನ್ನು ರಚಿಸಲಾಗುವುದು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಎಎಪಿಯು ಉತ್ತರಾಖಂಡದ ಸಿಎಂ ಅಭ್ಯರ್ಥಿಯಾಗಿ ನಿವೃತ್ತ ಕರ್ನಲ್ ಅಜಯ್ ಕೋತಿಯಾಲ್ ಅವರನ್ನು ಹೆಸರಿಸಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ ರಾಜ್ಯದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 56 ಸೀಟುಗಳನ್ನು ಗೆದ್ದು, ಸರ್ಕಾರ ರಚಿಸಿತ್ತು. ಕಾಂಗ್ರೆಸ್ 11 ಸೀಟುಗಳನ್ನು ಗೆದ್ದಿತ್ತು. ಇದೀಗ ಎಎಪಿ ಈ ರಾಜ್ಯಕ್ಕೆ ಪ್ರವೇಶ ನೀಡುತ್ತಿದ್ದು, ಯಾವ ರೀತಿಯ ಬದಲಾವಣೆ ತರಲಿದೆ ಎಂದು ಕಾದುನೋಡಬೇಕಿದೆ. (ಏಜೆನ್ಸೀಸ್)