ಲಾಕ್​ಡೌನ್​ನಿಂದ ದೆಹಲಿಯಲ್ಲಿ ಸಿಲುಕಿಕೊಂಡ, ಮರಳಿದ ಮೇಲೆ ಗುಪ್ತಾಂಗಗಳಿಗೆ ಸ್ಯಾನಿಟೈಸರ್​ ಹಾಕಿಸಿಕೊಂಡ!

sanitiser
sanitiser
Published on

ಪುಣೆ: ಕಚೇರಿಯ ಕೆಲಸದ ಮೇಲೆ ದೆಹಲಿಗೆ ತೆರಳಿದ್ದ ವ್ಯಕ್ತಿ ಲಾಕ್​ಡೌನ್ ಘೋಷಣೆಯಿಂದಾಗಿ ದೆಹಲಿಯಲ್ಲೇ ಸಿಲುಕಿಕೊಂಡಿದ್ದ. ಕಂಪನಿ ಹಣದಲ್ಲೇ ಲಾಡ್ಜ್​ನಲ್ಲಿ ಉಳಿದುಕೊಂಡ ಆತ ಲಾಕ್​ಡೌನ್​ ಸಡಿಲಗೊಂಡ ಬಳಿಕ ಮೇ 7ರಂದು ಪುಣೆಗೆ ಮರಳಿದ್ದ.

ಪುಣೆಯಲ್ಲಿ ಮತ್ತು 17 ದಿನ ಕ್ವಾರಂಟೈನ್​ಗೆ ಒಳಗಾದ ಆತ ಜೂ.12ರಂದು ಕಚೇರಿಗೆ ತೆರಳಿದಾಗ ಮಾಲೀಕನೊಂದಿಗೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ಇನ್ನಿಬ್ಬರು ಸಿಬ್ಬಂದಿಯೊಂದಿಗೆ ಸೇರಿ ಈ ವ್ಯಕ್ತಿಯ ಗುಪ್ತಾಂಗಗಳಿಗೆ ಸ್ಯಾನಿಟೈಸರ್​ ಸುರಿದು ಮಾಲೀಕ ವಿಕೃತಿ ಮೆರೆದಿದ್ದ. ಸಂತ್ರಸ್ತ ಈ ಬಗ್ಗೆ ಜುಲೈ 2ರಂದು ಪೊಲೀಸರಿಗೆ ದೂರು ನೀಡಿದ್ದಾನೆ.

ನಾನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ದೆಹಲಿಯಲ್ಲಿ ಪೇಂಟಿಂಗ್​ ಎಕ್ಸಿಬಿಷನ್​ ಸೇರಿ ವಿವಿಧ ವಸ್ತುಪ್ರದರ್ಶನಗಳನ್ನು ವ್ಯವಸ್ಥೆ ಮಾಡುವ ವಹಿವಾಟನ್ನು ನಮ್ಮ ಕಂಪನಿ ಹೊಂದಿದೆ. ಅದರಂತೆ ದೆಹಲಿಯಲ್ಲಿ ನಿಗದಿಯಾಗಿದ್ದ ಚಿತ್ರಪ್ರದರ್ಶನದ ಆಯೋಜನೆಗೆ ತೆರಳಿದ್ದೆ. ಆದರೆ, ದಿಢೀರ್​ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಅಲ್ಲಿಯೇ ಸಿಲುಕಿಕೊಂಡಿದ್ದೆ. ಕಂಪನಿಯ ಹಣ ಬಳಸಿಕೊಂಡು ಲಾಡ್ಜ್​ನಲ್ಲಿದ್ದೆ ಎಂದು ದೂರಿನಲ್ಲಿ ಸಂತ್ರಸ್ತ ವಿವರಿಸಿದ್ದಾನೆ.

ಲಾಕ್​ಡೌನ್​ ಅನ್ನು ಸ್ವಲ್ಪ ಸಡಿಲಗೊಳಿಸಿದ ಬಳಿಕ ಮೇ 7ರಂದು ಪುಣೆಗೆ ಮರಳಿದ್ದೆ. ಕಚೇರಿಗೆ ಹೋದಾಗ 17 ದಿನ ಕ್ವಾರಂಟೈನ್​ಗೆ ಒಳಪಡುವಂತೆ ನಮ್ಮ ಸಂಸ್ಥೆಯ ಮಾಲೀಕರು ಹೇಳಿದ್ದರು. ಅದರಂತೆ ನಾನು ಖಾಸಗಿ ಹೋಟೆಲ್​ನಲ್ಲಿ ಕ್ವಾರಂಟೈನ್​ಗೆ ಒಳಪಟ್ಟಿದ್ದೆ. ಇದರ ಖರ್ಚನ್ನು ಭರಿಸಲು ನನ್ನ ಮೊಬೈಲ್​ ಪೋನ್​ ಮತ್ತು ಡೆಬಿಟ್​​ ಕಾರ್ಡ್​ ಅನ್ನು ಒತ್ತೆ ಇಟ್ಟಿದ್ದೇನೆ ಎಂದು ಹೇಳಿದ್ದಾನೆ.

ಜೂನ್​ 13ರಂದು ನವದೆಹಲಿಯಲ್ಲಿ ಇದ್ದಾಗ ನಾನು ಬಳಸಿಕೊಂಡಿದ್ದ ಹಣವನ್ನು ಹಿಂದಿರುಗಿಸುವಂತೆ ಮಾಲೀಕ ಹಾಗೂ ಇನ್ನಿಬ್ಬರು ಸಹೋದ್ಯೋಗಿಗಳು ನನ್ನನ್ನು ಒತ್ತಾಯಿಸಲಾರಂಭಿಸಿದರು. ಆದರೆ ನನ್ನ ಬಳಿ ಹಣ ಇಲ್ಲವೆಂದಾಗ, ನನ್ನನ್ನು ಕಾರಿನಲ್ಲಿ ಅಪಹರಿಸಿ ಕರೆದೊಯ್ದರು. ಕಚೇರಿಯಲ್ಲಿ ನನ್ನನ್ನು ಅಕ್ರಮ ಬಂಧನದಲ್ಲಿ ಇರಿಸಿದರು. ಬಳಿಕ ಅವರೆಲ್ಲರೂ ನನ್ನನ್ನು ಮನಸೋಇಚ್ಛೆ ಥಳಿಸಿದರು. ನನ್ನ ಗುಪ್ತಾಂಗಗಳ ಮೇಲೆ ಸ್ಯಾನಿಟೈಸರ್​ ಸುರಿದು ವಿಕೃತಿ ಮೆರೆದರು. ಇದಾದ ಬಳಿಕ ನನ್ನನ್ನು ಬಿಡುಗಡೆ ಮಾಡಿದರು ಎಂದು ಹೇಳಿದ್ದಾನೆ.

ಸ್ವತಃ ತಾನೇ ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಾದೆ. ಇದೀಗ ಚೇತರಿಸಿಕೊಂಡ ಬಳಿಕ ದೂರು ದಾಖಲಿಸುತ್ತಿರುವುದಾಗಿ ಆತ ತಿಳಿಸಿದ್ದಾನೆ. ಪುಣೆಯ ಪೌಡ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net