

ಬೆಂಗಳೂರು: ಮೈಸೂರು ಮಹಾರಾಜರ ಕಾಲದಿಂದ ಇತ್ತೀಚಿನ ಇ-ಸ್ಟಾಂಪ್ ಪೇಪರ್ಗಳನ್ನು ನಕಲಿಯಾಗಿ ಸೃಷ್ಟಿಸಿ ಭೂಗಳ್ಳರಿಗೆ ಪೂರೈಕೆ ಮಾಡುತ್ತಿದ್ದ ಪ್ರಕರಣದಲ್ಲಿ ಸರ್ಕಾರಿ ನೌಕರರು, ವಕೀಲರು ಸಹ ಶಾಮೀಲು ಆಗಿರುವುದು ವಿಶೇಷ ತನಿಖಾ ದಳದ (ಎಸ್ಐಟಿ) ತನಿಖೆ ವೇಳೆ ಬೆಳಕಿಗೆ ಬಂದಿದೆ. ನಕಲಿ ಛಾಪಾ ಕಾಗದ ಮತ್ತು ಇ-ಸ್ಟಾಂಪ್ ಪೇಪರ್ ದಂಧೆ ಪ್ರಕರಣದ ತನಿಖೆಗೆ ಹೈಕೋರ್ಟ್ ಎಸ್ಐಟಿ ತನಿಖೆಗೆ ಸೂಚಿಸಿತ್ತು. ಈ ಮೇರೆಗೆ ಪೂರ್ವ ವಿಭಾಗ ಡಿಸಿಪಿ ಡಾ.ಎಸ್. ಡಿ. ಶರಣಪ್ಪ, ಬಾಣಸವಾಡಿ ಉಪ ವಿಭಾಗ ಎಸಿಪಿ ನಿಂಗಪ್ಪ ಬಿ. ಸಕ್ರಿ, ಗೋವಿಂದಪುರ ಠಾಣೆ ಇನ್ಸ್ಪೆಕ್ಟರ್ ಆರ್. ಪ್ರಕಾಶ್ ನೇತೃತ್ವದಲ್ಲಿ 4 ತಂಡ ರಚಿಸಲಾಗಿತ್ತು. ಒಂದೂವರೆ ತಿಂಗಳ ಕಾಲ ನಿಗಾವಹಿಸಿ ದಂಧೆಕೋರರ ಪತ್ತೆ ಮಾಡಲಾಯಿತು. ಕೋರ್ಟ್ನಿಂದ ಸರ್ಚ್ ವಾರಂಟ್ ಪಡೆದು ನ.13ರ ಬೆಳಗಿನ ಜಾವ ಐದು ಕಡೆ ದಾಳಿ ನಡೆಸಿ ವಿವೇಕನಗರದ ಹುಸೇನ್ ಮೋದಿ ಬಾಬು (58) ಬಾಪೂಜಿನಗರದ ಸೀಮಾ ಅಲಿಯಾಸ್ ಶಾವರ್ (45), ಶಾಮಣ್ಣನಗರದ ನಯಾಜ್ ಅಹಮದ್ (45) ವಿಜಯನಗರದ ಶಬ್ಬೀರ್ ಅಹಮದ್ (38) ಮತ್ತು ಬಸವೇಶ್ವರನಗರದ ಹರೀಶ್ (55) ಎಂಬುವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಐವರು ಪರಸ್ಪರ ಪರಿಚಿತರು. ಒಟ್ಟಿಗೆ ಸೇರಿ ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡು ಅಕ್ರಮ ದಂಧೆ ನಡೆಸುತ್ತಿದ್ದರು. ಒಂದು ಪೇಪರ್ಗೆ 3 ರಿಂದ 10 ಸಾವಿರ ರೂ.ವರೆಗೂ ಪಡೆಯುತ್ತಿದ್ದರು. ಇವರಿಂದ ಕಂದಾಯ ಅಧಿಕಾರಿಗಳು, ವಕೀಲರು ಹೆಚ್ಚಾಗಿ ಛಾಪಾ ಕಾಗದ ಮತ್ತು ಇ-ಸ್ಟಾಂಪ್ ಪೇಪರ್ ಖರೀದಿ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಬಂಧಿತರಿಂದ 63.57 ಲಕ್ಷ ರೂ. ಮೌಲ್ಯದ ನಕಲಿ ಛಾಪಾ ಕಾಗದ ಜಪ್ತಿ ಮಾಡಲಾಗಿದೆ. ಜತೆಗೆ ಕಾಟನ್ಪೇಟೆ ಎಸ್ಬಿಐ ಶಾಖೆ ರೌಂಡ್ ಸೀಲ್, ರಬ್ಬರ್ ಸೀಲುಗಳು, 233 ಖಾಲಿ ಕಾಗದ, ವಿವಿಧ ಮುಖಬೆಲೆಯ 208 ಖಾಲಿ ಇ-ಸ್ಟಾಂಪ್ ಪೇಪರ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ರ್ಯಾಂಕಿಂಗ್ ಸಹ ನಕಲಿ: ಛಾಪಾ ಕಾಗದ ನಿಷೇಧದ ಬಳಿಕ ಇ-ಸ್ಟಾಂಪ್ ಪೇಪರ್ ಜಾರಿಗೆ ಬಂದಿದೆ. ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಶುಲ್ಕ ಪಾವತಿ ಮಾಡಿ ಇ-ಸ್ಟಾಂಪ್ ಪೇಪರ್ ಪಡೆಯಬೇಕು. ಅಥವಾ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶುಲ್ಕ ಪಾವತಿಸಿ ಫ್ರ್ಯಾಂಕಿಂಗ್ ಮಾಡಿಸುತ್ತಿದ್ದರು. ಆದರೆ, ಆರೋಪಿಗಳು ಗಿರಾಕಿ ಕೇಳಿದ ಇಸವಿಗೆ ತಕ್ಕಂತೆ ಇ-ಸ್ಟಾಂಪ್ ಪೇಪರ್ ಸೃಷ್ಟಿಸಿ ಅದರ ಮೇಲೆ ನಕಲಿ ಫ್ರ್ಯಾಂಕಿಂಗ್ ಮಾಡಿ ಕೊಡುತ್ತಿದ್ದರು. ಈ ನಕಲಿ ಇ-ಸ್ಟಾಂಪ್ ಪೇಪರ್ ಬಳಸಿ ಭೂಗಳ್ಳರು ವ್ಯಾಜ್ಯಗಳಿಗೆ ಬಳಸಿ ಕೋರ್ಟ್ ಹಾದಿ ತಪ್ಪಿಸುತ್ತಿದ್ದರು.
ನಕಲಿ ಛಾಪಾ ಕಾಗದ ಸೃಷ್ಟಿ ಹೇಗೆ?: ಮೈಸೂರು ಮಹಾರಾಜರ ಕಾಲದಿಂದ 2020ರ ವರೆಗಿನ ಇ-ಸ್ಟಾಂಪ್ ಪೇಪರ್ಗಳನ್ನು ನಕಲಿ ಸೃಷ್ಟಿ ಮಾಡುತ್ತಿದ್ದರು. ಮಹಾರಾಜರ ಕಾಲದ ಅಸಲಿ ಛಾಪಾ ಕಾಗದ ಸಂಗ್ರಹಿಸಿರುವ ದಂಧೆಕೋರರು ಯಾವ ಇಸವಿಗೆ ಯಾವ ವಿನ್ಯಾಸದ ಛಾಪಕಾಗದ ಚಲಾವಣೆಗೆ ಇತ್ತು ಎಂದು ತಿಳಿದು ಅದಕ್ಕೆ ತಕ್ಕಂತೆ ಚಿಕ್ಕ ಮತ್ತು ದೊಡ್ಡ ಗಾತ್ರದ ಸ್ಕ್ರೀನ್ ಪ್ರಿಂಟ್ ಮೇಷಿನ್ ಸಿದ್ಧಪಡಿಸಿಕೊಳ್ಳುತ್ತಿದ್ದರು. ಖಾಲಿ ಕಾಗದ ಮೇಲೆ ಸ್ಕ್ರೀನ್ ಪ್ರಿಂಟ್ ಮಾಡಿ ಅದಕ್ಕೆ ಭಾರತ ಸರ್ಕಾರ ಎಂಬ ಆಂಗ್ಲ ಭಾಷೆಯಲ್ಲಿ ಮತ್ತು ಭಾರತ್ ಸರ್ಕಾರ್ ಹಿಂದಿ ಭಾಷೆಯಲ್ಲಿ ವಾಟರ್ ಮಾರ್ಕ್ ಮುದ್ರಿಸಿ ಮಾರಾಟ ಮಾಡುತ್ತಿದ್ದರು.
ಪೇಪರ್ ಏತಕ್ಕಾಗಿ ಬಳಕೆ?: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ಸುತ್ತಲಪ್ರದೇಶದಲ್ಲಿ ಆಸ್ತಿಯ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ನಕಲಿ ಛಾಪಾ ಕಾಗದ ಮತ್ತು ಇ-ಸ್ಟಾಂಪ್ ಪೇಪರ್ ದಂಧೆ ಶುರುವಾಗಿದೆ. ಹಳೆಯ ಮನೆ, ನಿವೇಶನಗಳನ್ನು ಅಕ್ರಮವಾಗಿ ವಶಕ್ಕೆ ಪಡೆಯುವ ಸಲುವಾಗಿ ಭೂಗಳ್ಳರು ಇಂತಹ ನಕಲಿ ಛಾಪ ಕಾಗದ ಅಥವಾ ಇ-ಸ್ಟಾಂಪ್ ಪೇಪರ್ ಬಳಸಿಕೊಂಡು ಮಹಾರಾಜರ ಕಾಲದ ಅಥವಾ ತಮಗೆ ಅನುಕೂಲಕ್ಕೆ ತಕ್ಕಂತೆ ನಕಲಿ ದಾಖಲೆ ಸೃಷ್ಟಿ ಮಾಡಿಕೊಳ್ಳುತ್ತಿದ್ದರು. ಮೂಲ ವಾರಸುದಾರರ ವಿರುದ್ಧ ಕೋರ್ಟ್ನಲ್ಲಿ ದಾವೇ ಹೂಡುತ್ತಿದ್ದರು. ಸಮಯಕ್ಕೆ ತಕ್ಕಂತೆ ರಾಜೀ ಸಂಧಾನ ಅಥವಾ ಇಡೀ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆದು ಅಧಿಕ ಲಾಭ ಮಾಡುತ್ತಿದ್ದರು. ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್ಗೆ ದಾವೇ ಹೂಡಿರುವ ಸಾಕಷ್ಟು ಪ್ರಕರಣಗಳು ಇದ್ದು, ಕೋರ್ಟ್ ಗಮನಕ್ಕೆ ಬಂದು ತನಿಖೆಗೆ ಆದೇಶ ನೀಡಿತ್ತು.