

ಬೆಂಗಳೂರು: ಅಂಗವಿಕಲರ ನೇಮಕಾತಿ ಪ್ರಕ್ರಿಯೆಯಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಮಾತ್ರವೇ ಪರಿಗಣಿಸದೆ ಅವರ ಕ್ರೀಯಾಶೀಲತೆಯನ್ನೂ ಮೌಲ್ಯಮಾಪನ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ. ಜತೆಗೆ ಶೇ.75 ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಯೊಬ್ಬರಿಗೆ ಸಹಾಯಕ ಲೆಕ್ಕಾಧಿಕಾರಿ ಹುದ್ದೆ ನೀಡುವಂತೆ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮಕ್ಕೆ (ಕೆಪಿಟಿಸಿಎಲ್) ನಿರ್ದೇಶನ ನೀಡಿದೆ.
ತನ್ನ ನೇಮಕಕ್ಕೆ ನಿರ್ದೇಶನ ಕೋರಿ ಕೆಪಿಟಿಸಿಎಲ್ನಲ್ಲಿ ಸಹಾಯಕರಾಗಿರುವ ಅನಿಲ್ ಕುಮಾರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೇಲ್ಮನವಿದಾರರು ಕೈಗಳಿಂದ ಬರೆಯುವುದು, ಕೈಗಳನ್ನು ಬಳಸಿ ಸಾಮಾನ್ಯ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ.
ಇದರಿಂದಾಗಿ ಅವರು ಸಹಾಯಕ ಲೆಕ್ಕಾಧಿಕಾರಿಯಾಗಿ ನೇಮಕಕ್ಕೆ ಅರ್ಹರಾಗಿದ್ದಾರೆ. ಈಗ ನಿರ್ವಹಿಸುತ್ತಿರುವ ಮತ್ತು ಸಹಾಯಕ ಲೆಕ್ಕಾಧಿಕಾರಿ ನಿರ್ವಹಣೆ ಮಾಡುವ ಕಾರ್ಯಗಳು ಬಹುತೇಕ ಒಂದೇ ಸ್ವರೂಪದ್ದಾಗಿರಲಿದೆ. ಅವರು ಬಡ್ತಿ ಪಡೆಯಲು ಸಂಪೂರ್ಣ ಅರ್ಹರಿದ್ದು, ಅನರ್ಹರು ಎಂಬುದಾಗಿ ೋಷಿಸುವುದು ಸರಿಯಲ್ಲ ಎಂದು ಹೇಳಿದೆ. ಕೋಟಾದಡಿ ನೇಮಕ ಮಾಡುವುದಕ್ಕೆ ಪರ್ಯಾಯ ಅಭ್ಯರ್ಥಿಗಳು ಇಲ್ಲದಿದ್ದರೆ, ಮಾನದಂಡಗಳನ್ನು ಸಡಿಲಿಸಿ ಅರ್ಜಿ ಸಲ್ಲಿಸಿರುವವರನ್ನೇ ಆಯ್ಕೆ ಮಾಡಬಹುದಾಗಿದೆ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.