ಹಸಿರು ಇಂಧನಕ್ಕೆ ಒತ್ತು; ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯ....

sdfsdfsdfsdf
Published on

ಸಾಂಪ್ರದಾಯಿಕ ಇಂಧನ ಮೂಲಗಳು ಬಹಳ ಇದ್ದಂತೆ ಕಂಡರೂ, ಅನಿರ್ದಿಷ್ಟ ಕಾಲ ವಿಶ್ವದ ಅಗತ್ಯಗಳನ್ನು ಈಡೇರಿಸುವುದು ಆಗದು. ಇದಲ್ಲದೆ, ಇದರಿಂದ ಮಾಲಿನ್ಯ ಸೇರಿ ವಿವಿಧ ಸಮಸ್ಯೆಗಳು ಸಹ ಹೆಚ್ಚಿನ ಪ್ರಮಾಣದಲ್ಲಿದ್ದು, ಪರ್ಯಾಯ ಮತ್ತು ಪರಿಹಾರೋಪಾಯಗಳತ್ತ ಹೆಚ್ಚು ಚಿಂತನೆ ನಡೆಯುತ್ತಿದೆ.

ಪ್ಯಾರಿಸ್ ಒಡಂಬಡಿಕೆ ಇದೇ ಆಶಯ ಹೊಂದಿದ್ದು, ಭಾರತವೂ ಇದಕ್ಕೆ ಸಹಿದಾರ ದೇಶವಾಗಿದೆ. ಈ ನಡುವೆ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 1500 ಕೋಟಿ ರೂ. ಹೂಡಿಕೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ‘ಇದರಿಂದ ಹಸಿರು ಇಂಧನ ರಂಗಕ್ಕೆ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಈ ಉಪಕ್ರಮದಿಂದ ವಾರ್ಷಿಕ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದ್ದು, ವಾರ್ಷಿಕವಾಗಿ ಅಂದಾಜು 7.49 ದಶಲಕ್ಷ ಟನ್ ಇಂಗಾಲಾಮ್ಲ ಹೊರಸೂಸುವಿಕೆ ತಡೆಗೆ ಸಮಾನವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗಲಿದೆ’ಎಂದು ಸರ್ಕಾರ ಇದರ ಪ್ರಯೋಜನಗಳನ್ನು ವಿವರಿಸಿದೆ.

ಇದರ ಜತೆಗೆ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 12 ಸಾವಿರ ಕೋಟಿ ರೂ. ಸಾಲ ಒದಗಿಸಿ, 4500 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಅನುವು ಮಾಡಲಾಗುತ್ತದೆ ಎಂದೂ ಸರ್ಕಾರ ಹೇಳಿದೆ. ಇದೇ ಸಂದರ್ಭದಲ್ಲಿ, ಕರ್ನಾಟಕದ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದ ಬೆಳವಣಿಗೆಯೊಂದು ಗಮನ ಸೆಳೆಯುವಂತಿದೆ. ಇಲ್ಲಿನ ಸುಮಾರು 30 ಸಾವಿರ ಕುಟುಂಬಗಳು ಹಿಂದೆ ಇಂಧನ ಮೂಲವಾಗಿ ಕಟ್ಟಿಗೆಯನ್ನು ಅವಲಂಬಿಸಿದ್ದು, ಇದರಿಂದ ಸುತ್ತಮುತ್ತಲಿನ ಅರಣ್ಯದ ಮೇಲೆ ಒತ್ತಡ ಬೀಳುತ್ತಿತ್ತು. ಈಗ ಐದು ವರ್ಷಗಳಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಮುಂತಾದ ಯೋಜನೆಗಳಡಿ ಗ್ಯಾಸ್ ಸಿಲಿಂಡರ್ ಸವಲತ್ತು ಪಡೆದು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲಿ ಅರಣ್ಯ ಪ್ರದೇಶದ ಮೇಲಿನ ಅವಲಂಬನೆ ಬಹುಮಟ್ಟಿಗೆ ಕಡಿಮೆಯಾಗಿದೆ.

ಹೀಗಾಗಿ ಸಹಜವಾಗಿ ಅರಣ್ಯದ ಬೆಳವಣಿಗೆ ಮುಂಚಿಗಿಂತ ಹೆಚ್ಚಾಗಿದ್ದು, ಅಂತರ್ಜಲ ಕೂಡ ವೃದ್ಧಿಯಾಗಿದೆ ಎಂದು ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳು ಹೇಳುತ್ತಾರೆ. ಇದಲ್ಲದೆ, ಕಟ್ಟಿಗೆಯ ಬಳಕೆಯಿಂದ ಹೊಗೆಯಿಂದಾಗಿ ಆರೋಗ್ಯದ ಮೇಲೂ ಪರಿಣಾಮ ಸಹಜ. ಆ ನಿಟ್ಟಿನಲ್ಲೂ ಉಪಯೋಗವಾಗಿದೆ. ಜನರು ಸಹ ಪರಿಸರದ ಮೇಲೆ ಆದಷ್ಟು ಒತ್ತಡ ಕಡಿಮೆ ಮಾಡುವ ಜೀವನಶೈಲಿ ಅಳವಡಿಕೆ ಮಾಡಿಕೊಳ್ಳುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಇಂಧನ ಮೂಲಗಳ ಬಳಕೆಯನ್ನು ಎಷ್ಟೇ ಕಡಿಮೆ ಮಾಡುತ್ತೇವೆಂದರೂ ಅದು ಪ್ರಾಯೋಗಿಕವಾಗಿ ಆಚರಣೆಯಲ್ಲಿ ಬರುವುದು ಕಷ್ಟ.

ಏಕೆಂದರೆ ಜಾಗತಿಕ ಬೇಡಿಕೆ ಆ ಪ್ರಮಾಣದಲ್ಲಿ ಇದೆ. ಇದಕ್ಕೆ ಸ್ವಲ್ಪಮಟ್ಟಿನ ಪರಿಹಾರವೆಂದರೆ, ಅಸಾಂಪ್ರದಾಯಿಕ ಅಥವಾ ನವೀಕರಿಸಬಹುದಾದ ಇಂಧನ ಮೂಲಗಳತ್ತ ಹೆಚ್ಚಿನ ಗಮನ ಮತ್ತು ಪ್ರೋತ್ಸಾಹ ನೀಡುವುದು. ಪ್ಯಾರಿಸ್ ಒಡಂಬಡಿಕೆಯಲ್ಲಿ ಈ ಸಂಬಂಧ ಭಾರತ ಹಲವು ಅಂಶಗಳಿಗೆ ಸಹಮತ ವ್ಯಕ್ತಪಡಿಸಿದ್ದು, ಅವನ್ನು ಜಾರಿಗೆ ತರುವ ಬದ್ಧತೆಯೂ ಇದೆ. ನಮ್ಮಲ್ಲಿ, ಸೌರ, ಪವನ ಇತ್ಯಾದಿ ನೈಸರ್ಗಿಕ ಶಕ್ತಿಮೂಲಗಳು ಹೇರಳ ಪ್ರಮಾಣದಲ್ಲಿದ್ದು, ಈಚಿನ ದಿನಗಳಲ್ಲಿ ಸರ್ಕಾರಗಳು ಆ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದು ಹೌದಾದರೂ, ಆ ಪ್ರಮಾಣ ಹೆಚ್ಚಿದಲ್ಲಿ ಎದ್ದುಕಾಣುವಂಥ ಬದಲಾವಣೆ ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net