ದೇಶೀಯ ಉತ್ಪಾದನೆಗೆ ಒತ್ತು

editorial april 20
Published on

ರೊನಾ ಸೋಂಕಿನ ಹಾವಳಿ ಜಾಗತಿಕವಾಗಿ ವ್ಯಾಪಿಸಿದೆ. ವೈದ್ಯಕೀಯ ಸೌಲಭ್ಯಗಳಲ್ಲಿ, ಸುಸಜ್ಜಿತ ವ್ಯವಸ್ಥೆಗಳಲ್ಲಿ ವಿಶ್ವದ ಮುಂಚೂಣಿ ಎನಿಸಿಕೊಂಡ ಹಲವು ರಾಷ್ಟ್ರಗಳೇ ಕರೊನಾ ಸೋಂಕು ಆವರಿಸಿಕೊಂಡ ಬಳಿಕ ಹೈರಾಣಾಗಿ ಹೋಗಿವೆ, ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿವೆ. ಹಾಗೆ ನೋಡಿದರೆ, ಶಸ್ತ್ರಾಸ್ತ್ರ ಸಂಗ್ರಹದ ಹುಚ್ಚುಸ್ಪರ್ಧೆಗೆ ಬಿದ್ದ ಜಗತ್ತು ಈ ಧಾವಂತದಲ್ಲಿ ಜೀವ ಉಳಿಸುವ ವೈದ್ಯಕೀಯ ಕ್ಷೇತ್ರದ ಅಗತ್ಯಗಳನ್ನೇ ಕಡೆಗಣಿಸಿತು. ಈ ವಾಸ್ತವ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತಿದೆ ಮತ್ತು ಯಾವುದು ಆದ್ಯತೆಯ ವಿಷಯವಾಗಬೇಕು, ಆರೋಗ್ಯರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳು ಎಷ್ಟು ಮುಖ್ಯ ಎಂಬುದರ ಅರಿವು ನಿಧಾನವಾಗಿ ಮೂಡುತ್ತಿದೆ. ಡಾಲರ್ ಗತ್ತಿನಲ್ಲಿ ಮೆರೆದಾಡುತ್ತಿದ್ದ ಅಮೆರಿಕ ಕೂಡ ಇಂದು ಸೂಕ್ತ ಸಂಖ್ಯೆಯ ವೆಂಟಿಲೇಟರ್​ಗಳಿಲ್ಲದೆ ಪರದಾಡುತ್ತಿದೆ. ಇಟಲಿ, ಸ್ಪೇನ್​ನ ಸ್ಥಿತಿಯಂತೂ ಚಿಂತಾಜನಕವಾಗಿದೆ. ಚೀನಾದಿಂದ ನಕಲಿ ಟೆಸ್ಟ್ ಕಿಟ್​ಗಳನ್ನು ಪಡೆದ ಸ್ಪೇನ್ ಹೊಸಬಗೆಯ ಸಂಕಷ್ಟಕ್ಕೆ ಎದುರಾಗಿದೆ. ಭಾರತದಲ್ಲಿ ಕೂಡ ಕರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವೈದ್ಯಕೀಯ ಸವಲತ್ತುಗಳ ಬೇಡಿಕೆಯೂ ಹೆಚ್ಚಿದೆ.

ಸಮಾಧಾನದ ಸಂಗತಿ ಎಂದರೆ ಭಾರತವು ವೈದ್ಯಕೀಯ ಉಪಕರಣಗಳು ಸೇರಿ ಸುರಕ್ಷಾಕವಚ, ಮಾಸ್ಕ್, ಗ್ಲೌಸ್​ಗಳ ದೇಶೀಯ ತಯಾರಿಕೆಗೆ ಒತ್ತು ನೀಡಿದೆ. ಇಂಥ ಹೊತ್ತಲ್ಲಿ ಬೇರೆ ದೇಶಗಳನ್ನು ಅವಲಂಬಿಸುವುದರಿಂದ ಅನಗತ್ಯ ವಿಳಂಬ, ಗುಣಮಟ್ಟದೊಂದಿಗೆ ರಾಜಿಯಂಥ ಆತಂಕಗಳು ಇರುತ್ತವೆ. ಹಾಗೆ ನೋಡಿದರೆ, ಭಾರತ ದೊಡ್ಡ ಪ್ರಮಾಣದಲ್ಲಿ ವೈದ್ಯರು, ನರ್ಸಿಂಗ್ ಸಿಬ್ಬಂದಿಯನ್ನು ಹೊಂದಿದೆಯಾದರೂ ಮುಖ್ಯವಾಗಿ ಕೊರತೆ ಇರುವುದು ಆರೋಗ್ಯ ಸೌಕರ್ಯಗಳದ್ದೇ. ದೇಶದ ಗಡಿಗಳಲ್ಲಿ ಭದ್ರತಾ ಪಡೆಗಳು ಸದಾ ಸನ್ನದ್ಧವಾಗಿ ಇರುವಂತೆ ಆರೋಗ್ಯದ ವಿಷಯದಲ್ಲೂ ಅಷ್ಟೇ ಸಮರ್ಪಕ ವ್ಯವಸ್ಥೆಯನ್ನು ಹೊಂದುವುದು ಅತ್ಯಗತ್ಯ. ಕರೊನಾ ಪ್ರಕರಣ ಈ ನಿಟ್ಟಿನಲ್ಲಿ ವ್ಯವಸ್ಥೆಯ ಕಣ್ಣು ತೆರೆಸಿದೆ ಎನ್ನಬಹುದು.

ರಾಜ್ಯದ ಭಟ್ಕಳದ ಖಾಸಗಿ ಕಾರ್ಖಾನೆ ಕರೊನಾ ನಿಯಂತ್ರಿಸಬಲ್ಲ ‘ವೈಯಕ್ತಿಕ ಸುರಕ್ಷಾ ಸಾಧನ’ಕ್ಕೆ (ಪಿಪಿಎ ಕಿಟ್) ರೂಪ ನೀಡುತ್ತಿದೆ. ಸೋಂಕು ವಿರುದ್ಧದ ಹೋರಾಟದಲ್ಲಿ ಇಂಥ ರಕ್ಷಕಗಳ ಉಪಯೋಗ ತೀವ್ರ ಪ್ರಮಾಣದಲ್ಲಿದೆ ಎಂಬುದು ಗಮನಾರ್ಹ. ಅದೇ ರೀತಿ ಧಾರವಾಡದ ಐಐಟಿಯವರು ಕಿಮ್್ಸ ಸಹಕಾರದೊಂದಿಗೆ ವೈಯಕ್ತಿಕ ಸುರಕ್ಷಾ ಸಾಧನದ ಮುಖ್ಯ ಭಾಗವಾಗಿರುವ ಮುಖ ಕವಚ(ಫೇಸ್ ಶೀಲ್ಡ್)ವನ್ನು ಸಿದ್ಧಪಡಿಸಿದ್ದಾರೆ. ಮಾಸ್ಕ್ ತಯಾರಿಕಾ ವಿಧಾನವನ್ನು ತಿಳಿಸಿ ಕೊಡಲು ಐಐಟಿ ಮುಂದಾಗಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ದೇಶದ ಹಲವು ಉದ್ಯಮಗಳು ವೈದ್ಯಕೀಯ ಉಪಕರಣ ಅಥವಾ ವೈಯಕ್ತಿಕ ಸುರಕ್ಷಾ ಸಾಧನಗಳ ತಯಾರಿಕೆಯತ್ತ ಮುಖ ಮಾಡಿವೆ. ಈ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮತ್ತಷ್ಟು ನವೋದ್ಯಮಗಳು ಬರುವಂತಾಗಬೇಕಿದೆ. ದೇಶೀಯ ತಯಾರಿಕೆಯಿಂದ ವೆಚ್ಚ ಕಡಿಮೆ ಆಗುತ್ತದೆ ಅಲ್ಲದೆ ಸ್ವಾವಲಂಬನೆ ನಿಟ್ಟಿನಲ್ಲೂ ಒಂದು ಹೆಜ್ಜೆ ಮುಂದಿರಿಸಿದಂತಾಗುತ್ತದೆ. ಇಂಥ ಪ್ರಯತ್ನಗಳಿಂದ ಸ್ಥಳೀಯವಾಗಿ ವ್ಯಾಪಕ ಪ್ರಮಾಣದ ಉದ್ಯೋಗ ಸೃಷ್ಟಿಯಾಗುವುದರ ಜತೆಗೆ ನಮ್ಮ ರೂಪಾಯಿ ಮೌಲ್ಯವೂ ಸುಧಾರಿಸಲಿದೆ. ಎಲ್ಲ ರೀತಿಯ ಆತಂಕಗಳಿಂದ ದೂರಾಗಲು ನಮ್ಮ ಜನರೂ ಕೂಡ ಸ್ವದೇಶಿ ಉತ್ಪನ್ನಗಳ ಬಳಕೆಗೆ ಒತ್ತು ನೀಡುವುದು ಕೂಡ ಅನಿವಾರ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net