

ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ, ಪ್ರಜಾಪ್ರಭುತ್ವ, ನ್ಯಾಯಾಂಗ, ಪತ್ರಿಕಾ ರಂಗ ದಮನ ಮಾಡಿದ ಕಾಂಗ್ರೆಸ್ ನ ನ್ಯಾಯ ಯಾತ್ರೆ ಹಾಸ್ಯಾಸ್ಪದ. ಅದಕ್ಕೆ ಮೂರು ಕಾಸಿನ ಬೆಲೆಯಿಲ್ಲವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗೇಲಿ ಮಾಡಿದರು.
ಜಯನಗರ ನಾಲ್ಕನೇ ಹಂತದ ಗಣೇಶ ದೇವಸ್ಥಾನ ಆವರಣ ಭಾನುವಾ ಸ್ವಚ್ಛಗೊಳಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದೇಶದಲ್ಲಿ ಸರ್ವಾಧಿಕಾರ ಆಡಳಿತ ಜನಸಾಮಾನ್ಯರ ಬದುಕು ಕಿತ್ತುಕೊಂಡ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಮಾಡಿದವರಿಗೆ ನ್ಯಾಯ ಕೇಳಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ದಕ್ಷಿಣ ಭಾಗದಿಂದ ಜೋಡೋ ಯಾತ್ರೆ ಶುರು ಮಾಡಿದ್ದರು. ನಂತರ ಉತ್ತರ ಭಾಗದ ಮೂರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋತರು. ರಾಹುಲ್ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಅವನತಿ ಕಾಣುತ್ತದೆ.
ಕಾಂಗ್ರೆಸ್ ನಾಯಕರು ಅನೇಕ ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ನೆಹರು ಕಾಲದಿಂದ ರಾಹುಲ್ ಗಾಂಧಿಯವರೆಗೆ ರಾಮ ಮಂದಿರವನ್ನು ವಿರೋಧಿಸಿ ಭಾರತೀಯರ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ನ್ಯಾಯ ಯಾತ್ರೆ ಯಾತ್ರೆ ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ.
ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭವಿಷ್ಯ ಕೇಳಿಬಂದಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ಯಾತ್ರೆ ಮಾಡುತ್ತಾರೆ. ಇದರಿಂದ ಯಾವುದೇ ಲಾಭವಿಲ್ಲ. ಚುನಾವಣೆಯಲ್ಲಿ ಮೋದಿ ಗೆಲ್ಲುವುದು ಗ್ಯಾರಂಟಿ ಎಂದರು.
ರಾಮಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಖಂಡಿಸುತ್ತೇವೆ. ಅವರು ತೀವ್ರವಾಗಿ ದಾಳಿ ನಡೆಸಿ ಮಾತಾಡುತ್ತಿದ್ದಾರೆ. ಅಲ್ಲಿಗೇ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ. ತಿರುಪತಿಗೇ ಏಕೆ ಹೋಗಬೇಕು, ಧರ್ಮಸ್ಥಳಕ್ಕೇ ಏಕೆ ಹೋಗಬೇಕು, ಯಲ್ಲಮ್ಮ ದೇವಸ್ಥಾನಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡಬಾರದು. ಇವೆಲ್ಲ ಸಿದ್ದರಾಮಯ್ಯನವರ ಸಂತೆ ಭಾಷಣ.
ಮಸೀದಿಗೆ ಏಕೆ ಹೋಗಬೇಕು, ಟೋಪಿ ಏಕೆ ಹಾಕಬೇಕು, ಮನೆಯಲ್ಲೇ ಪೂಜೆ ಮಾಡಬಹುದು ಎಂದು ಕೂಡ ಪ್ರಶ್ನೆ ಮಾಡಬಾರದು. ಸಿದ್ದರಾಮಯ್ಯ ತಾವು ಕೂಡ ಹಿಂದು ಎನ್ನುವುದೇ ಢೋಂಗಿತನ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಪ್ರಜ್ಞೆಯೇ ಇಲ್ಲ. ಆದರೆ ಮುಸ್ಲಿಮರಿಗೆ ಅನುದಾನ ಕೊಡುತ್ತಿದ್ದಾರೆ. ಬೆಣ್ಣೆ ಹೆಚ್ಚುವ ರಾಜಕಾರಣ ಬಿಡದಿದ್ದರೆ ಬಹುಸಂಖ್ಯಾತ ಹಿಂದುಗಳು ಸರಿಯಾದ ಸುಣ್ಣ ಹಚ್ಚುತ್ತಾರೆ ಎಂದು ಆರ್.ಅಶೋಕ್ ತಿವಿದರು.
ವಿ.ಸೋಮಣ್ಣ ಅವರದ್ದು ಏನೂ ಸಮಸ್ಯೆ ಇಲ್ಲ. ಅವರು ಲೋಕಸಭೆ ಚುನಾವಣೆಯಲ್ಲಿ ಶ್ರಮಿಸಲಿದ್ದಾರೆ. ಉಳಿದಿದ್ದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ ಎಂದರು.
ಹಾನಗಲ್ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲಿನ ರಾಜಕೀಯ ನಾಯಕರು ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಪೊಲೀಸರ ಮೂಲಕ ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
ನೈತಿಕ ಪೊಲೀಸ್‌ಗಿರಿ, ದಾದಾಗಿರಿ, ದೌರ್ಜನ್ಯ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಬೆಳಗಾವಿಯಲ್ಲಿ ಬೆತ್ತಲೆ ಮಾಡಿದ ಪ್ರಕರಣವೂ ಹೀಗೆಯೇ ಆಗಿದೆ. ಸರ್ಕಾರ ಸತ್ತುಹೋಗಿದೆ ಎಂದು ಜನರು ಅಂದುಕೊಂಡಿದ್ದಾರೆ.
ಬರಗಾಲ ಹಾಗೂ ಕಾನೂನು ಸುವ್ಯವಸ್ಥೆ ಕುಸಿತದ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಆರ್.ಅಶೋಕ್ ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ಶಾಸಕ ಕೆ.ಸಿ.ರಾಮಮೂರ್ತಿ, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.