ಭ್ರೂಣಲಿಂಗ ಪತ್ತೆ-ಹತ್ಯೆ ಪ್ರಕರಣ ತನಿಖೆ ಬಹುತೇಕ ಪೂರ್ಣ!ಸದ್ಯದಲ್ಲಿಯೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್, ಸರ್ಕಾರಕ್ಕೆ ವರದಿ ಸಲ್ಲಿಕೆ

Crime Logo
Published on

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಸಿಐಡಿ ತಂಡ ಇನ್ನೊಂದು ವಾರದಲ್ಲಿ ನ್ಯಾಯಾಲಕ್ಕೆ ಚಾರ್ಜ್‌ಶೀಟ್ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಒಟ್ಟು ಹನ್ನೆರಡು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತಂಡ ಸದ್ಯದಲ್ಲಿಯೇ ಭ್ರೂಣ ಹತ್ಯೆಯ ವರದಿ ಸರ್ಕಾರಕ್ಕೆ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಇನ್ನು ಭ್ರೂಣ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರಗಳ ಮೂಲ ಸಿಕ್ಕಿಲ್ಲ. ಕಳೆದ ಎರಡು ತಿಂಗಳಿಂದ ತನಿಖೆ ನಡೆಸುತ್ತಿದ್ದರೂ ಸಿಐಡಿಗೆ ಸ್ಕ್ಯಾನಿಂಗ್ ಯಂತ್ರಗಳ ಖರೀದಿ ಮೂಲ ಮಾತ್ರ ಪತ್ತೆಯಾಗಿಲ್ಲ. ಈ ಮಧ್ಯೆ ಆರೋಗ್ಯ ಇಲಾಖೆಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಸ್ಕ್ಯಾನಿಂಗ್ ಯಂತ್ರಗಳ ಮಾರಾಟ ಹಾಗೂ ಬಳಕೆ ಅಕ್ರಮ ಇದೆ. ಆದರೆ ಭ್ರೂಣ ಪತ್ತೆಗೆ ಬಳಸುತ್ತಿದ್ದ ಯಂತ್ರಗಳು ತಂದಿದ್ದು ಎಲ್ಲಿ ಎನ್ನುವುದು ಇನ್ನು ನಿಗೂಢವಾಗಿದೆ.
ಮಂಡ್ಯ ಮೈಸೂರಿನಲ್ಲಿ ದಾಳಿ ಮಾಡಲಾಗಿತ್ತು. ಭ್ರೂಣ ಹತ್ಯೆ ಪ್ರಕರಣದಲ್ಲಿ ಶಿವಲಿಂಗೇಗೌಡ, ನಯನ್‌ಕುಮಾರ್, ವೀರೇಶ್, ನವೀನ್‌ಕುಮಾರ್, ಡಾ.ತುಳಸಿರಾಮ್, ರಿಜ್ಮಾ ಖಾನಂ, ಮೀನಾ, ಡಾ.ಚಂದನ್ ಬಲ್ಲಾಳು ಮತ್ತು ನಿಸಾರ್ ಸೇರಿ ೧೨ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಏನಿದು ಪ್ರಕರಣ?
ಆರೋಪಿಗಳು, ಗರ್ಭಿಣಿಯರನ್ನು ಗುರುತಿಸಿಕೊಂಡು ಮಂಡ್ಯದ ಆಲೆಮನೆಯಲ್ಲಿ ಸ್ಕ್ಯಾನ್ ಮಾಡಿಸುತ್ತಿದ್ದರು. ಹೆಣ್ಣು ಭ್ರೂಣವಿರುವುದು ಖಚಿತವಾದರೆ ಮೈಸೂರಿನ ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು. ಆರೋಪಿಗಳು ಪ್ರತಿ ಭಾನುವಾರ ಭ್ರೂಣ ಪತ್ತೆ ಮಾಡುತ್ತಿದ್ದರು. ಈ ಮಾಹಿತಿ ಕೆಲವರಿಗೆ ಗೊತ್ತಾದ ಹಿನ್ನೆಲೆ ಮೈಸೂರಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಮತ್ತೊಂದು ಆಸ್ಪತ್ರೆ ಆರಂಭಿಸಿದ್ದರು. ಅಲ್ಲಿ ಗರ್ಭಿಣಿಯರನ್ನು ನೋಂದಣಿ ಮಾಡಿಕೊಂಡು ಗರ್ಭಪಾತ ಮಾಡಿಸುತ್ತಿದ್ದರು. ಆರೋಪಿಗಳು ಕಳೆದ ಮೂರು ವರ್ಷಗಳಿಂದ ಪ್ರತಿ ತಿಂಗಳು ಕನಿಷ್ಠ ೨೦ ರಿಂದ ೨೫ ಭ್ರೂಣ ಹತ್ಯೆ ಮಾಡುತ್ತಿದ್ದರು. ಈ ಅವಧಿಯಲ್ಲಿ ಸುಮಾರು ೯೦೦ಕ್ಕೂ ಹೆಣ್ಣು ಭ್ರೂಣ ಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಈ ದಂಧೆ ಬೆಂಗಳೂರು, ಮೈಸೂರಲ್ಲದೆ ರಾಮನಗರ, ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆಗೂ ವ್ಯಾಪ್ತಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಬೆಂಗಳೂರಿನಿಂದ ಮೈಸೂರು ಮಾರ್ಗದಲ್ಲಿರುವ ಗರ್ಭಿಣಿಯರನ್ನು ಹೆಚ್ಚಾಗಿ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿ ಹೆಗಲಿಗೆ ವಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net