

ವಾಷಿಂಗ್ಟನ್ಡಿಸಿ: ಬಿಲಿಯನೇರ್ ಎಲಾನ್ ಮಸ್ಕ್ ಸೋಮವಾರ(ಆಗಸ್ಟ್ 13) ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್(ಹಿಂದೆ ಟ್ವಿಟರ್)ನಲ್ಲಿ ಸಂದರ್ಶನ ಮಾಡಿದ್ದಾರೆ. ಸುಮಾರು ಎರಡು ಗಂಟೆ ನಡೆಸಿದ ಇಂಟರ್ವ್ಯೂನಲ್ಲಿ ಹಲವು ವಿಚಾರಗಳನ್ನು ಕೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಬಳಿಕ ಡೆಮಾಟ್ರಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸಂದರ್ಶಿಸುವ ತಮ್ಮ ಆಸಕ್ತಿಯನ್ನು ಎಲಾನ್ ಮಸ್ಕ್ ವ್ಯಕ್ತಪಡಿಸಿದ್ದಾರೆ. ಕಮಲಾ ಹ್ಯಾರಿಸ್ ಅವರನ್ನು ತಮ್ಮ ಸಾಮಾಜಿಕ ಮಾಧ್ಯಮದ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಸಂದರ್ಶನ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ರಾಜಕೀಯ ವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಿ ಮಾತನಾಡಲು ಸಿದ್ಧವಿರುವುದಾಗಿ ತಿಳಿಸಿದರು.
ಎಲಾನ್ ಮಸ್ಕ್ ಕಮಲಾ ಹ್ಯಾರಿಸ್ ಅವರ ಸಂದರ್ಶನದ ಬಗ್ಗೆ ಮಾಡಿರುವ ಪೋಸ್ಟ್ ಅನ್ನು 2.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಪೋಸ್ಟ್ ಮಾಡಿದ 40 ನಿಮಿಷಗಳಲ್ಲಿ ಸುಮಾರು 7,000 ಬಾರಿ ಮರುಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯ ವ್ಯಕ್ತವಾಗುತ್ತಿದೆ. ಕಮಲಾ ಹ್ಯಾರಿಸ್ ಚರ್ಚೆಗೆ ಬರುತ್ತಾರೆ ಎಂದು ಕೆಲವರು, ಅವರು ಬರುವುದಿಲ್ಲ ಎಂದು ಮತ್ತೆ ಕೆಲವರು, ಕಮಲಾ ಹ್ಯಾರಿಸ್ ಹಾಗೆಲ್ಲಾ ಮಾಡುವುದಿಲ್ಲ. ಪ್ರಚಾರಕ್ಕಿಂತ ಈ ಸಂದರ್ಶನದಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸೋಮವಾರ ನಡೆದ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಎಲಾನ್ ಮಸ್ಕ್ ಅವರ ಲೈವ್ ಸ್ಟ್ರೀಮ್ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹೇಳಿದ ಸಮಯಕ್ಕಿಂತ 40 ನಿಮಿಷಗಳ ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಅದಕ್ಕೆ ಎಲಾನ್ ಮಸ್ಕ್ ಸೈಬರ್ ದಾಳಿಯಿಂದಾಗಿ ತಡವಾಯಿತು ಎಂದು ಕಾರಣ ಹೇಳಿ ಕ್ಷಮೆಯಾಚಿಸಿದರು. ಆದರೆ ಸೈಬರ್ ದಾಳಿ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಸುಮಾರ 2 ಗಂಟೆ ನಡದ ಸಂದರ್ಶನದಲ್ಲಿ ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಅವರಿಗೆ ಇತ್ತೀಚಿನ ಹತ್ಯೆ ಪ್ರಯತ್ನದ ಬಗ್ಗೆ, ಅಮೆರಿಕ ಚುನಾವಣೆ ಬಗ್ಗೆ, ವಿಶ್ವದ ಜಾಗತಿಕ ಪರಿಸ್ಥಿತಿ ಬಗ್ಗೆ ಹೀಗೆ ಹಲವು ವಿಚಾರಗಳ ಬಗ್ಗೆ ಕೇಳಲಾಯಿತು.
ಸದ್ಯ ಕಮಲಾ ಹ್ಯಾರಿಸ್ ಅವರನ್ನು ಎಕ್ಸ್ನಲ್ಲಿನ ಲೈವ್ ಸ್ಟ್ರೀಮ್ಗೆ ಎಲಾನ್ ಮಸ್ಕ್ ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಕಮಲಾ ಹ್ಯಾರಿಸ್ ಒಪ್ಪಿಕೊಳ್ಳುತ್ತಾರೆಯೇ ನೋಡಬೇಕಿದೆ. ಏಕೆಂದರೆ ಕಳೆದ ಮೂರು ವಾರಗಳಿಂದ ಕಮಲಾ ಹ್ಯಾರಿಸ್ ಒಂದೇ ಒಂದು ಸಂದರ್ಶನವನ್ನು ನೀಡಿಲ್ಲ. (ಏಜೆನ್ಸೀಸ್)