

ಬೆಂಗಳೂರು: ಮೈಕ್ರೋಬ್ಲಾಗಿಂಗ್ ಆ್ಯಪ್ ಆಗಿರುವ ಟ್ವಿಟರ್ನಲ್ಲಿ ಸದ್ಯದಲ್ಲೇ ಧಾರಾಳವಾಗಿ ಬರೆಯಬಹುದು. ಅಂಥದ್ದೊಂದು ಪ್ರಮುಖ ಬದಲಾವಣೆ ಆಗಲಿರುವ ಕುರಿತು ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಏಕೆಂದರೆ ಇದನ್ನು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರೇ ಹೇಳಿಕೊಂಡಿದ್ದಾರೆ.
ಈ ಮಹತ್ವದ ಬದಲಾವಣೆ ಆಗುತ್ತಿದ್ದಂತೆ ತುಂಬಾ ಬರೆಯುವವರು, ದೊಡ್ಡ ದೊಡ್ಡ ಬರಹಗಳನ್ನು ಹಂಚಿಕೊಳ್ಳುವವರಿಗೆ ಅನುಕೂಲವಾಗಲಿದೆ. ಅರ್ಥಾತ್, ಟ್ವಿಟರ್ನಲ್ಲಿ ಕ್ಯಾರೆಕ್ಟರ್ ಲಿಮಿಟ್ ಹೆಚ್ಚಾಗಲಿದೆ. ಆರಂಭದಲ್ಲಿ ಟ್ವಿಟರ್ನಲ್ಲಿ ಬರೀ 140 ಕ್ಯಾರೆಕ್ಟರ್ನಷ್ಟು ಮಾತ್ರ ಬರೆಯಲು ಸಾಧ್ಯವಿತ್ತು. ಆಮೇಲೆ ಅದನ್ನು ದುಪ್ಪಟ್ಟುಗೊಳಿಸಿದ್ದರಿಂದ ಸದ್ಯ ಕ್ಯಾರೆಕ್ಟರ್ ಲಿಮಿಟ್ 280 ಇದೆ.
ಆದರೆ ಈ ಮಿತಿ ಇನ್ನೂ ಹೆಚ್ಚಾಗಲಿರುವುದನ್ನು ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. 'ಟ್ವಿಟರ್ನ ಕ್ಯಾರೆಕ್ಟರ್ ಲಿಮಿಟ್ 280ರಿಂದ 4000 ಆಗಲಿದೆಯಂತೆ, ಹೌದಾ?' ಎಂಬುದಾಗಿ ಬಳಕೆದಾರರೊಬ್ಬರು ಕೇಳಿರುವ ಪ್ರಶ್ನೆಗೆ ಖುದ್ದು ಎಲಾನ್ ಮಸ್ಕ್ ಯೆಸ್ ಎಂದು ಹೇಳುವ ಮೂಲಕ ಹೌದು ಎಂಬುದನ್ನು ಖಚಿತ ಪಡಿಸಿದ್ದಾರೆ. ಅಂದಹಾಗೆ ಇದು ಯಾವತ್ತಿನಿಂದ ಜಾರಿಗೆ ಬರಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಇದು ಜಾರಿಗೆ ಬಂದ ಬಳಿ ಥ್ರೆಡ್ ಮೂಲಕ ಸರಣಿ ಟ್ವೀಟ್ ಮಾಡುವ ಅನಿವಾರ್ಯತೆ ತಪ್ಪಲಿದೆ. ಒಂದೇ ಟ್ವೀಟ್ನಲ್ಲಿ ಜಾಸ್ತಿ ವಿಷಯ ಹೇಳಬಹುದಾಗಿರುತ್ತದೆ.