

ಎಲಾನ್ ಮಸ್ಕ್... ಈ ಹೆಸರಲ್ಲೇ ಅದೇನೋ ಸ್ಫೂರ್ತಿಯಿದೆ. ಸಾಹಸ, ರೋಮಾಂಚಕಾರಿ, ಧೈರ್ಯ, ಸಿರಿವಂತಿಕೆ ಮೊದಲಾದವುಗಳಿಗೂ ಇದನ್ನು ಅನ್ವರ್ಥ ಎನ್ನಬಹುದೇನೋ.
ಜನರನ್ನು ಮಂಗಳ ಯಾನಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿರುವ, ಶಬ್ದಕ್ಕಿಂತಲೂ ಮಿಗಿಲಾದ ವೇಗದಲ್ಲಿ ಸಂಚರಿಸುವ ಕಾರಿನಲ್ಲಿ ಸಂಚಾರ ಸಾಧ್ಯವಾಗಿಸುವ ನಿಟ್ಟಿನಲ್ಲಿ ಅಮೆರಿಕದ ಉದ್ಯಮಿಯ ಪ್ರಯತ್ನಗಳು ನಡೆದಿವೆ.
ತನ್ನ ಒಂದು ಟ್ವೀಟ್ನಿಂದಾಗಿ ಕಂಪನಿಗೆ 22 ಸಾವಿರ ಕೋಟಿ ರೂ. ನಷ್ಟ ತಂದಿಟ್ಟಿದ್ದ ಮಸ್ಕ್. ಕಾರ್ಯಾರಂಭಕ್ಕೆ ಅನುಮತಿ ನೀಡಿದಿದ್ದರೆ, ಎಲೆಕ್ಟ್ರಿಕ್ ಕಾರು ಟೆಸ್ಲಾ ಉತ್ಪಾದನೆ ಘಟಕವನ್ನೇ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್ಗೆ ಸ್ಥಳಾಂತರಿಸುವುದಾಗಿ ಸ್ಥಳೀಯಾಡಳಿತಕ್ಕೆ ಎಚ್ಚರಿಕೆ ನೀಡಿದ್ದ.
ಇದೆಲ್ಲ ಹಳೆಯ ಕಥೆ. ಹೊಸದೇನಪ್ಪ ಎಂದರೆ, ಮಸ್ಕ್ ಪತ್ನಿ ಗ್ರಿಮ್ಸ್ ಇತ್ತೀಚೆಗೆ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಅದರ ಹೆಸರನ್ನು ಮಸ್ಕ್ ಟ್ವಿಟರ್ನಲ್ಲಿ ಅನಾವರಣಗೊಳಿಸಿದ್ದರು. ಅದು ಹೀಗಿತ್ತು.... "X Æ A-12 Musk"
ಇದು ಮಸ್ಕ್ ಅಭಿಮಾನಿಗಳು ಹಾಗೂ ನೆಟ್ಟಿಗರನ್ನೆಲ್ಲ ಅಚ್ಚರಿಗೆ ದೂಡಿತ್ತು. ಈ ಹೆಸರಿನ ಹಿನ್ನೆಲೆ ಅರಿಯದಿದ್ದರೆ ಇದನ್ನು ಉಚ್ಚರಿಸುವುದು ಸಾಧ್ಯವೇ ಇಲ್ಲ. ಇದಕ್ಕಾಗಿ ಗ್ರೀಮ್ಸ್ ವಿವರಣೆ ನೀಡಿದ್ದರು. ಅದನ್ನು ಅವರದ್ದೇ ಪದಗಳಲ್ಲಿ ಓದಿ....
ಇಂಥ ಹೆಸರಿಡುವ ಪ್ರಸ್ತಾವನೆ ಪತ್ನಿಯಿಂದಲೇ ಬಂದಿತ್ತು ಎಂದು ಮಸ್ಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಜತೆಗೆ, ಅದನ್ನು ಉಚ್ಚರಿಸುವ ಸರಿಯಾದ ಬಗೆಯನ್ನು ತಿಳಿಸಿದ್ದರು. ಅದರಂತೆ ಮಗನ ಹೆಸರಿನ ಮೊದ ಅಕ್ಷರ ಇಂಗ್ಲಿಷ್ ವರ್ಣಮಾಲೆಯ ಎಕ್ಸ್ ಆಗಿದೆ. ಇನ್ನು Æ ಎನ್ನುವುದಕ್ಕೆ Ash ನಲ್ಲಿರರುವ 'ಆ್ಯ' ಎಂದು ಉಚ್ಚರಿಸಬೇಕು. ನಂತರದ A-12 ಅವರ ನೆಚ್ಚಿನ ವಿಮಾನದ ಹೆಸರು. ಅಲ್ಲಿಗೆ ಮಸ್ಕ್ ಮಗನ ಹೆಸರನ್ನು 'ಎಕ್ಸ್ ಆ್ಯ ಏ-ಟೆಲ್ವ್ ಎಂದು ಕರೆಯಬಹುದು.
ಆದರೆ, ಈ ಹೆಸರಿಡಲು ಕಾನೂನಾತ್ಮಕ ತೊಡಕು ಎದುರಾಯಿತು. ಕ್ಯಾಲಿಫೋರ್ನಿಯಾದ ಕಾನೂನಿನ ಪ್ರಕಾರ ಸಂಖ್ಯೆಯನ್ನು ಹೆಸರಿನಲ್ಲಿ ಸೇರಿಸುವಂತಿಲ್ಲ. ಹೀಗಾಗಿ ನಮ್ಮ ಮಗನ ಹೆಸರನ್ನು ಬದಲಾಯಿಸಿದೀರಾ ಎಂದು ನೆಟ್ಟಿಗರು ದಂಪತಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮಸ್ಕ್ ಪತ್ನಿ ಗ್ರಿಮ್ಸ್ ಹೌದು... ಈಗ ಮಗನ ಹೆಸರು "X Æ A-Xii " ಎಂದು ಉತ್ತರಿಸಿದ್ದಾರೆ.
ಅಲ್ಲಿಗೆ ಅಂಕಿಯ ಬದಲು ರೋಮನ್ ಅಕ್ಷರಗಳಲ್ಲಿ 12 ಎಂದು ಬರೆದುಕೊಂಡಿದ್ದಾರೆ. ಜನರು ಇದನ್ನು ಹೇಗೆ ಸ್ವೀಕರಿಸಲಿ ಭವಿಷ್ಯದಲ್ಲಿ ಈ ಹೆಸರಿಗೆ ಮಗನ ಪ್ರತಿಕ್ರಿಯೆ ಹೇಗಿರಬಹುದು ಎಂಬುದಷ್ಟೇ ಸದ್ಯದ ಕುತೂಹಲ.