ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯಲ್ಲ

Untitled design (1)
Published on

ನವದೆಹಲಿ: ಬಿಹಾರದಲ್ಲಿನ ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ತೆಗೆಯುವುದಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್​ಗೆ ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಬಿಹಾರದಲ್ಲಿನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಸಂಬಂಧ ಶನಿವಾರ ಹೊಸದಾಗಿ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಆಯೋಗ ಈ ಭರವಸೆ ನೀಡಿದೆ.

ಆ.1ರಂದು ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ವ್ಯಕ್ತಿಯ ಹೆಸರನ್ನು ಪೂರ್ವ ಸೂಚನೆ, ವಿಚಾರಣೆಗೆ ಅವಕಾಶ ಹಾಗೂ ಸಮಂಜಸ ಆದೇಶವಿಲ್ಲದೆ ತೆಗೆಯುವುದಿಲ್ಲ ಎಂಬುದನ್ನು ಆಯೋಗ ಖಚಿತಪಡಿಸಿದೆ. ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿನ ಎಸ್​ಐಆರ್ ವಿಚಾರವಾಗಿ ಈ ಅಫಿಡವಿಟ್ ಸಲ್ಲಿಸಿರುವ ಆಯೋಗ, ಪಟ್ಟಿಯಲ್ಲಿ ತಪ್ಪಾದ ಅಳಿಸುವಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅಂತಿಮ ಪಟ್ಟಿಯಲ್ಲಿ ಪ್ರತಿ ಅರ್ಹ ಮತದಾರರ ಹೆಸರನ್ನು ಸೇರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದೆ. ಬಿಹಾರದಲ್ಲಿ 65 ಲಕ್ಷ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ಆ.6ರಂದು ಆಪಾದಿಸಿದ್ದಕ್ಕೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಅಫಿಡವಿಟ್ ಸಲ್ಲಿಸಿದೆ.

ಪ್ರಕರಣ ಸಂಬಂಧ ಮುಂದಿನ ವಿಚಾರಣೆ ಆ.13ರಂದು ಎಂದು ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ದುರ್ಬಲ ಮತದಾರರು ಪ್ರಸ್ತುತ ಯಾವುದೇ ದಾಖಲೆಗಳನ್ನು ಹೊಂದಿರದಿದ್ದರೂ ಅಂಥ ದಾಖಲೆಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಅವರಿಗೆ ಅನುಕೂಲ ಮಾಡಿಕೊಡಲಾಗುವುದು. ಮತದಾರರಿಗೆ 2 ಹಂತದ ಮೇಲ್ಮನವಿ ಅವಕಾಶವಿದ್ದು, ಯಾವುದೇ ಪ್ರತಿಕೂಲ ಕ್ರಮದ ವಿರುದ್ಧ ಸಾಕಷ್ಟು ಪರಿಹಾರ ಹೊಂದಿದ್ದಾರೆ ಎಂದೂ ಆಯೋಗ ತಿಳಿಸಿದೆ.

ಕರಡು ಪಟ್ಟಿಯನ್ನು ಆ.1ರಿಂದ ಸೆ.1ರ ಅವಧಿಯಲ್ಲಿ ಸಂಪೂರ್ಣವಾಗಿ ಪರಿಶೀಲಿಸಲು ಅನುಕೂಲವಾಗುವಂತೆ ರಾಜಕೀಯ ಪಕ್ಷಗಳಿಗೆ ಮುದ್ರಿತ ಮತ್ತು ಡಿಜಿಟಲ್ ಪ್ರತಿಗಳನ್ನು ಒದಗಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಆನ್​ಲೈನ್ ಸೌಲಭ್ಯ ನೀಡಲಾಗಿದೆ. ಎಸ್​ಐಆರ್ ಸಮಯದಲ್ಲಿ ಎಣಿಕೆ ನಮೂನೆಗಳನ್ನು ಸ್ವೀಕರಿಸದ ಮತದಾರರ ಪಟ್ಟಿಯನ್ನು ಕರಡು ಪಟ್ಟಿ ಪ್ರಕಟಿಸುವ ಮೊದಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್​ಗಳೊಂದಿಗೆ ಹಂಚಿಕೊಂಡಿರುವುದಾಗಿಯೂ ಆಯೋಗ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net