ಆಚಾರ-ವಿಚಾರಗಳಿಂದ ಮನುಷ್ಯನ ವ್ಯಕ್ತಿತ್ವ ಉನ್ನತೀಕರಣ

gonibeedu matt
ಗೋಣಿಬೀಡಿನ ಶ್ರೀ ಶೀಲಸಂಪಾದನಾ ಮಠದಲ್ಲಿ ಅನುಭಾವ ಸಂಗಮ-101 ಮಾಸಿಕ ಸಮಾರಂಭ ಹಾಗೂ ಋಣ ಸ್ಮರಣೆ ಕಾರ್ಯಕ್ರಮವನ್ನು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಸಾಯಿನಾಥ ಸ್ವಾಮೀಜಿ, ಎಸ್.ದಯಾಶಂಕರ್, ಜಿ.ಎ.ಹಿರೇಮಠ, ಮಲ್ಲಿಕಾರ್ಜುನ ಗುಂಗೆ, ಅರವಿಂದ್ ತರೀಕೆರೆ, ಮಂಗೋಟೆ ರುದ್ರೇಶ್, ಎಂ.ಬಿ.ಚಂದ್ರಚೂಡ್, ರುದ್ರಾರಾಧ್ಯ, ಬಸವರಾಜಪ್ಪ ವೆಂಕಟಾಪುರ್ ಇದ್ದರು.
Published on

ಶಿವಮೊಗ್ಗ: ವ್ಯಕ್ತಿತ್ವ ವಿಕಸನಕ್ಕೆ ಆದರ್ಶ ಮೌಲ್ಯಗಳು ಅಗತ್ಯ. ಧರ್ಮ, ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳು ಮನುಷ್ಯನ ವ್ಯಕ್ತಿತ್ವವನ್ನು ಉನ್ನತೀಕರಿಸುತ್ತವೆ. ಸತ್ಯ, ಶುದ್ಧ ಕಾಯಕದ ಮೂಲಕ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಗೋಣಿಬೀಡಿನ ಶೀಲಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಗೋಣಿಬೀಡಿನ ಶ್ರೀ ಶೀಲಸಂಪಾದನಾ ಮಠದಲ್ಲಿ ಭಾನುವಾರ ಶ್ರೀ ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್‌ನಿಂದ ಅನುಭಾವ ಸಂಗಮ-101 ಮಾಸಿಕ ಸಮಾರಂಭ ಹಾಗೂ ಋಣ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಚಿತ್ತ ಚಾಂಚಲ್ಯಕ್ಕೆ ಒಳಗಾದರೆ ಅಧರ್ಮದ ಹಾದಿ ಹಿಡಿಯುತ್ತಾನೆ. ಆದರೆ ಧರ್ಮ ಹಾಗೂ ಸಾಧನೆಯ ಹಾದಿ ಸುಲಭವಲ್ಲ. ಇಂದ್ರಿಯ ನಿಗ್ರಹದಿಂದ ಪ್ರಯತ್ನ ಮತ್ತು ಪರಿಶ್ರಮ ಪಟ್ಟಾಗ ಮಾತ್ರ ಸಾಧನೆ ಸಾಧ್ಯ. ಇಂತಹ ಸಾಧನೆಗೆ ಬಸವಾದಿ ಶಿವಶರಣರ ಬೋಧನೆ, ತತ್ವ-ಸಿದ್ಧಾಂತಗಳು ಪ್ರೇರೇಪಣೆ ನೀಡುತ್ತವೆ ಎಂದರು.
ಆದಿಚುಂಚನಗಿರಿ ಶಾಖಾಮಠದ ಶ್ರೀ ಸಾಯಿನಾಥ ಸ್ವಾಮೀಜಿ ಮಾತನಾಡಿ, ಸಂಕಟ ಬಂದಾಗ ದೇವರನ್ನು ಸ್ಮರಿಸದೆ ಸನ್ನಡತೆಯಿಂದ ಪ್ರತಿನಿತ್ಯ ದೇವರು, ಧರ್ಮ, ಗುರುಗಳನ್ನು ನಂಬಿ ನಡೆಯುವವರಿಗೆ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತವೆ. ಜೀವನ ಸುಖಮಯವಾಗಿರುತ್ತದೆ. ಬದುಕಿ ಬಾಳುವ ಜನಾಂಗಕ್ಕೆ ಧರ್ಮ ನಿಷ್ಠೆ, ಸದ್ಭಾವನೆಗಳನ್ನು ಬೆಳೆಸುವ ಅಗತ್ಯವಿದೆ. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಧರ್ಮಪೀಠಗಳ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಭಗವಂತ ಪ್ರತಿ ಮನುಷ್ಯನಿಗೂ ವೈವಿಧ್ಯತೆಯನ್ನು ನೀಡಿದ್ದಾನೆ. ಈ ವೈವಿಧ್ಯತೆಯನ್ನು ಅನುಭವಿಸಿ ಜೀವನವನ್ನು ನಡೆಸಬೇಕೇ ಹೊರತು ಪರಸ್ಪರ ಹೋಲಿಕೆ ಸಲ್ಲದು. ಹೋಲಿಕೆಯಿಂದ ನೋವು, ದುಖಃ, ಕಷ್ಟ-ನಷ್ಟವೇ ಹೆಚ್ಚು. ಸುಖವನ್ನು ಪಡೆಯಲು ಸೇವೆಯೂ ಸಹ ಒಂದು ಮಾರ್ಗ. ನಮ್ಮ ಸೇವೆಗೆ ತಕ್ಕಂತೆ ಪ್ರತಿಫಲ ಲಭಿಸುತ್ತದೆ ಎಂದು ಅಭಿಪ್ರಾಯಿಸಿದರು.
ಶ್ರೀ ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್‌ನ ಕಾರ್ಯಾಧ್ಯಕ್ಷ ಎಸ್.ದಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾಸೋಹ ನಿಧಿಗೆ ಸಹಾಯ ಮಾಡಿದವರು ಮತ್ತು ಮಠದ ವಿವಿಧ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕಾಳೇನಹಳ್ಳಿ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಅರವಿಂದ್ ತರೀಕೆರೆ, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ಹೈಕೋರ್ಟ್ ವಕೀಲರಾದ ಎಂ.ಬಿ.ಚಂದ್ರಚೂಡ್, ಯೋಗಾಚಾರ್ಯ ರುದ್ರಾರಾಧ್ಯ, ಬಸವರಾಜಪ್ಪ ವೆಂಕಟಾಪುರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net