

ತಮಿಳುನಾಡು: ಕಾಡಿನಿಂದ ನಾಡಿನತ್ತ ಬಂದ ಮೂರು ಕಾಡಾನೆಗಳು ಹೊಲಗದ್ದೆಗಳಲ್ಲಿ ಮೇವು ತಿಂದ ಬಳಿಕ ಕೆರೆಯಲ್ಲಿ ಜಲಕ್ರೀಡೆಯಾಡಿ ಬಿಸಿಲ ಬೇಗೆ ತಣಿಸಿಕೊಂಡಿವೆ.
ಕಳೆದ ಒಂದು ತಿಂಗಳಿಂದ ಆನೇಕಲ್ ಭಾಗದಲ್ಲಿ ಸಾಕಷ್ಟು ಕಾಡಾನೆಗಳು ನಾಡಿನತ್ತ ಬಂದು ರೈತರು ಬೆಳೆದಿದ್ದ ಬೆಳೆಗಳನ್ನು ತಿಂದು ಮತ್ತೆ ಕಾಡಿನತ್ತ ಹೋಗುತ್ತಿದ್ದು, ಆನೇಕಲ್ ಭಾಗದಿಂದ ನಿನ್ನೆ ಮೂರು ಕಾಡಾನೆಗಳು ಹೊಸೂರು ಸಮೀಪದ ಕರ್ನೂರು ಗ್ರಾಮಕ್ಕೆ ಆಹಾರ ಅರಸಿ ಹೋಗಿದ್ದವು.
ಕರ್ನೂರು ಗ್ರಾಮದಲ್ಲಿ ರೈತರು ಹೊಲ ಗದ್ದೆಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ತಿಂದು ಹಾಕಿರುವ ಕಾಡಾನೆಗಳು, ಬಳಿಕ ಬಿಸಿಲು ಹೆಚ್ಚಾಗುತ್ತಿದ್ದಂತೆ ಕೆರೆಯಲ್ಲಿ ಮೂರು ಕಾಡಾನೆಗಳು ಸ್ವಚ್ಚಂದವಾಗಿ ನೀರಿನಲ್ಲಿ ಸ್ನಾನ ಮಾಡಿವೆ. ಈ ದೃಶ್ಯ ಸ್ಥಳೀಯ ರೈತರ ಮೊಬೈಲಿನಲ್ಲಿ ಸೆರೆಯಾಗಿದೆ.
ಆನೇಕಲ್ ಬಾಗದಿಂದ ಬಂದ 3 ಕಾಡಾನೆಗಳು ಕೃಷ್ಣಗಿರಿ ಜಿಲ್ಲೆಯ ಹೊಸೂರು ಬಳಿಯ ಜಿಲ್ಲಾ ಜಾನುವಾರು ಸಾಕಣೆ ಕೇಂದ್ರದ ಬಿದಿರಿನ ಪೊದೆಯಲ್ಲಿ ಆಶ್ರಯ ಪಡೆದು ಓಡಾಡುತ್ತಿದ್ದವು, ಇದನ್ನು ಕಂಡ ಅರಣ್ಯ ಇಲಾಖೆ ಆನೆಗಳನ್ನು ಕಾಡಿಗೆ ಓಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳು ಕಾಡಿಗೆ ಹೋದವು ಎಂದು ಹಿಂತಿರುಗುತ್ತಿದ್ದಂತೆ ಕರ್ನೂರು ಗ್ರಾಮದ ಸುತ್ತಮುತ್ತ ಮತ್ತೆ ಆನೆಗಳು ಕಾಣಿಸಿಕೊಂಡಿವೆ.
ಇನ್ನು ಕೆರೆಯಲ್ಲಿ ಗಂಟೆಗಟ್ಟಲೆ ಕಾಲ ಸೊಂಡಿಲಿನಿಂದ ನೀರನ್ನು ಮೈಮೇಲೆ ಹಾಕಿಕೊಂಡು ಆಟ ಆಡುತ್ತಿರುವುದನ್ನು ನೋಡಲು ಅಕ್ಕಪಕ್ಕದ ಜನ ಆಗಮಿಸಿ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.