

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಪ್ರಮುಖ ಆಕರ್ಷಣೆಯಾಗಿದ್ದ ಆನೆರಂಗ ಸಾವನ್ನಪ್ಪಿದೆ. ಈ ಮೂಲಕ ಒಂದೇ ವಾರದಲ್ಲಿ ಮರಿಯಾನೆ ಸೇರಿ ಮೂರು ಆನೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.
35 ವರ್ಷ ಪ್ರಾಯದ ರಂಗ ತನ್ನ ಮೈಕಟ್ಟಿನಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿ ಎಲ್ಲರನ್ನೂ ಆಕರ್ಷಿಸಿದ್ದ. ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆಸಲಾಗುತ್ತಿದ್ದ ಆನೆಗಳ ಕ್ರೀಡಾಕೂಟದಲ್ಲಿಯೂ ರಂಗ ಎಲ್ಲರ ಮನಗೆದ್ದಿದ್ದ. ಶುಕ್ರವಾರ ರಾತ್ರಿ ಕಾಡಾನೆ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಒಳಗಾಗಿ ಕಾಡಿನಲ್ಲಿಯೇ ಸಾವನ್ನಪ್ಪಿದ್ದಾನೆ.
ಸಕ್ರೆಬೈಲು ಕ್ಯಾಂಪ್‌ನಲ್ಲಿ ಗೀತಾ ಆನೆಗೆ ಜನಿಸಿದ್ದ ರಂಗ ಅತ್ಯಂತ ಬಲಶಾಲಿಯಾಗಿದ್ದ. ಮಾವುತರು ಶನಿವಾರ ಬೆಳಗ್ಗೆ ಆನೆಗಳನ್ನು ಕರೆತರಲು ಹೋದಾಗ ಸಕ್ರೆಬೈಲು ಕಾಡಿನ ಮೂರು ಕಿಲೋಮೀಟರ್ ದಟ್ಟಡವಿಯ ಒಳಗೆ ಆನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯ ಡಾ.ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅರಣ್ಯದಲ್ಲಿ ಮೂರು ಕಾಡಾನೆಗಳಿದ್ದು, ಅವುಗಳಿಂದಲೇ ರಂಗನ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ. ಎರಡು ವರ್ಷದ ಹಿಂದೆ ಇದೇ ಭಾಗದಲ್ಲಿ ಕಾಡಾನೆಗಳ ದಾಳಿಗೆ ನೋ ಟಸ್ಕರ್ ಎಂಬ ಆನೆ ಮೃತಪಟ್ಟಿತ್ತು.
ಸಕಲೇಶಪುರ ತಾಲೂಕಿನ ಮಳಲಿ ಕಾಫಿತೋಟದಿಂದ ಬಂದಿದ್ದ ಮರಿಯಾನೆ ಅ.17ರಂದು ಬಹುಅಂಗಾಂಗ ವೈಲಫ್ಯದಿಂದ ಮೃತಪಟ್ಟರೆ, ಅ.20ರಂದು ಏಕದಂತ ಆನೆ ಹೃದಯಾಘಾತ ಮತ್ತು ಲಿವರ್ ಸಮಸ್ಯೆಯಿಂದ ಕಾಡಿನಲ್ಲೇ ಮೃತಪಟ್ಟಿತ್ತು. ಇದೀಗ ಆನೆ ರಂಗನೂ ಸಾವನಪ್ಪಿದ್ದಾನೆ.