

ಬೆಂಗಳೂರು: ದೇಶಾದ್ಯಂತ ಆನೆಗಳ ಸಂಖ್ಯೆಯನ್ನು ಗಣತಿಯನ್ನು ಸಾಮಾನ್ಯವಾಗಿ ಪ್ರತೀ ಐದು ವರ್ಷಕ್ಕೊಮ್ಮೆ ಮಾಡಲಾಗುತ್ತದೆ. 2017ರಲ್ಲಿ ಗಣತಿ ನಡೆದ ಬಳಿಕ 2022ರಲ್ಲಿ ಪುನಃ ಗಣತಿ ನಡೆದಿದ್ದು, ಅದರ ವರದಿ ಬಿಡುಗಡೆಯಾಗಿದೆ. ರಾಜ್ಯದ ಆನೆಗಳ ಸ್ಥಿತಿಗತಿ ಕುರಿತ ವರದಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಬುಧವಾರ ಬಿಡುಗಡೆ ಮಾಡಿದರು.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆನೆಗಳ ಸಂಖ್ಯೆಯು ಸುಮಾರು 346ರಷ್ಟು ಹೆಚ್ಚಳವಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಅನೆಗಳಿದ್ದವು, ಈಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯವೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಹುಲಿ ಗಣತಿ ವರದಿಯ ಪ್ರಕಾರ ಕರ್ನಾಟಕದಲ್ಲಿ ಗಣನೀಯವಾಗಿ ಸಂಖ್ಯೆ ಹೆಚ್ಚಿದೆ. ಈಗ ಆನೆ ಸಂಖ್ಯೆಯೂ ಹೆಚ್ಚಾಗಿರುವುದು ಕಾಣಬಹುದು. ಈ ಮೂಲಕ ಕರ್ನಾಟಕ ವನ್ಯಜೀವಿ ರಕ್ಷಣೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ಆದ್ಯತೆ ಕೊಡುತ್ತಿದ್ದೇವೆ ಎಂದರು.
ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ 17ರಿಂದ ಮೇ 19ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಲಾಯಿತು.
ಆನೆ ಗಣತಿ ನಡೆದಿದ್ದು ಯಾವಾಗ?
ಈ ಗಣತಿಯ ಸ್ವರೂಪ, ಕ್ಷೇತ್ರ ಸಿಬ್ಬಂದಿಗೆ ತರಬೇತಿ ಗಣತಿ ಫಲಿತಾಂಶಗಳ ವಿಶ್ಲೇಷಣೆ ಹಾಗೂ ವರದಿ ತಯಾರಿಕೆಯಲ್ಲಿ ಆರ್. ಸುಕುಮಾರ್ ಅವರ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಅರಣ್ಯ ಇಲಾಖೆಯು ಆನೆಗಳ ಗಣತಿಯನ್ನು ನಡೆಸಿದೆ. ರಾಜ್ಯದ 32 ವಿಭಾಗಗಳಿಂದ 3400ಕ್ಕೂ ಹೆಚ್ಚು ಸಿಬ್ಬಂದಿ ಈ ಗಣತಿ ಕಾರ್ಯದಲ್ಲಿ ಭಾಗವಹಿಸಿದರು.
ಗಣತಿಯನ್ನು ನೇರ ಎಣಿಕೆ ಅಥವಾ ಬ್ಲಾಕ್ ಎಣಿಕೆ, ಟ್ರಾಂಜೆಕ್ಟೃ್ ಸಮಿತಿ ಅಥವಾ ಲದ್ದಿ ಎಣಿಕೆ ವಿಧಾನ ಹಾಗೂ ವಾಟರ್ ಹೋಲ್ ಎಣಿಕೆ ಮೂಲಕ ಕೈಗೊಳ್ಳಲಾಗಿದೆ. ನೇರ ಎಣಿಕೆ ಅಥವಾ ಬ್ಲಾಕ್ ಎಣಿಕೆ ವಿಧಾನದಲ್ಲಿ 5 ಚದರ ಕಿ.ಮೀ ವ್ಯಾಪ್ತಿಯ ವಿವಿಧ ಮಾದರಿಯ ಬ್ಲಾಕ್‌ಗಳಲ್ಲಿ ಆನೆಗಳ ನೇರ ಏಣಿಕೆಯನ್ನು ನಡೆಸಲಾಯಿತು.
ಗಣತಿ ಸ್ವರೂಪ ಹೇಗಿತ್ತು?
ಟ್ರಾಂಜೆಕ್ಟೃ್ ಸಮೀಕ್ಷೆ ಅಥವಾ ಲದ್ದಿ ಎಣಿಕೆ ವಿಧಾನದಲ್ಲಿ 2 ಕಿ.ಮೀ ಉದ್ದದ ಟ್ರಾಂಜೆಕ್ಟೃ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಎಣಿಸಲಾಯಿತು. ಈ ಅಂಕಿ ಅಂಶಗಳ ಮಾದರಿಗಳ ಮೂಲಕ ಆನೆಗಳ ಸಂಖ್ಯೆಯ ಮಾಹಿತಿ ಪಡೆಯಲು ಸದರಿ ದತ್ತಾಂಶವನ್ನು ಸಂಸ್ಕರಿಸಲಾಗುತ್ತಿದೆ. ಮತ್ತು ಸದ್ಯದಲ್ಲಿಯೇ ಫಲಿತಾಂಶ ದೊರೆಯುವುದು.
ವಾಟರ್ ಹೋಲ್ ಎಣಿಕೆ ವಿಧಾನದ ಮೂಲಕ ಆನೆಗಳು ನಿಯಮಿತವಾಗಿ ಭೇಟಿ ನೀಡುವ ವಾಟರ್ ಹೋಲ್ಗಳು ಮತ್ತು ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ನೋಡಿ ಎಣಿಸುವ ಕಾರ್ಯ ನಡೆಸಲಾಯಿತು. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗಿದೆ.
ರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯ ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಎಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18,975 ಚದರ ಕಿ.ಮೀ ಪ್ರದೇಶದ ಪೈಕಿ 6,104 ಚದರ ಕಿ.ಮೀ ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಇದೇ ಮೊದಲ ಬಾರಿಗೆ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿರುವುದರಿಂದ ಸಮೀಕ್ಷೆಯ ವರದಿಯು ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
32 ವಿಭಾಗದಲ್ಲಿ ಸಮೀಕ್ಷೆ
ಭದ್ರಾವತಿ ವಿಭಾಗ-8
ಯಲ್ಲಾಪುರ ವಿಭಾಗ- 2
ಹಳಿಯಾಲ ವಿಭಾಗ- 3
ಕೋಲಾರ ವಿಭಾಗ- 13
ಕುದುರೆಮುಖ- 5
ಚಿಕ್ಕಮಗಳೂರು- 33
ಮಂಗಳೂರು ವಿಭಾಗ- 47
ಕಾಳಿ ಹುಲಿ ಸಂರಕ್ಷಿತ ಪ್ರದೇಶ- 38
ಕೊಪ್ಪ ವಿಭಾಗ- 128
ಮೈಸೂರು ಪ್ರಾದೇಶಿಕ ವಿಭಾಗ- 59
ರಾಮನಗರ ವಿಭಾಗ- 33
ವಿರಾಜಪೇಟೆ ವಿಭಾಗ- 58
ಹಾಸನ ವಿಭಾಗ- 66
ಮಡಿಕೇರಿ ಪ್ರಾದೇಶಿಕ ವಿಭಾಗ- 214
ಕಾವೇರಿ (ವನ್ಯಜೀವಿ ವಿಭಾಗ)- 236
ಮಡಿಕೇರಿ (ವನ್ಯಜೀವಿ ವಿಭಾಗ )- 113
ಶಿವಮೊಗ್ಗ (ವನ್ಯಜೀವಿ ವಿಭಾಗ)- 127
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ- 127
ಭದ್ರಾ ಹುಲಿ ಸಂರಕ್ಷಿತ ಪ್ರದೇಶ- 445
ಎಂ.ಎಂ.ಹಿಲ್ಸ್ ವನ್ಯಜೀವಿ ವಿಭಾಗ- 706
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ- 619
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ- 831
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ- 1116
ವಿಭಾಗ ಮಟ್ಟದ ಆನೆ ಗಣತಿ (ಸಂಖ್ಯೆ)