

ನವದೆಹಲಿ: ಆನೆ ದಾಳಿಯಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ. ಆದರೆ, ಆನೆಯ ತುಂಟಾಟದ ವಿಡಿಯೋಗಳು ಕಾಣಸಿಗುವುದು ತುಂಬಾ ವಿರಳ. ನಾವು ನಿಮಗೆ ಆನೆ ಮತ್ತು ಕಾಡೆಮ್ಮೆ ನಡುವಿನ ತುಂಟಾಟದ ಅಪರೂಪದ ವಿಡಿಯೋವನ್ನು ತೋರಿಸುತ್ತೇವೆ ಮುಂದೆ ನೋಡಿ!
ಅಷ್ಟಕ್ಕೂ ನಾವು ತೋರಿಸುವ ವಿಡಿಯೋ ಇತ್ತೀಚಿನದ್ದಲ್ಲ. ಇದನ್ನು 2013ರಲ್ಲಿ ಸಬಿಸಬಿ ರಿಸರ್ವ್ (SabiSabiReserve) ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋವನ್ನು 9 ವರ್ಷದ ಬಾಲಕ ಅಲೆಕ್ಸ್ ರೇ ಎಂಬಾತ ಸೆರೆಹಿಡಿದ್ದು, ಭಾರತೀಯ ಅರಣ್ಯಾಧಿಕಾರಿ ಸುಸಾಂತ್ ನಂದಾ ಅವರು ಮತ್ತೊಮ್ಮೆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈಗಲೂ ಭಾರಿ ವೈರಲ್ ಆಗಿದೆ.
ಆನೆಗಳು ಅತ್ಯಂತ ತಮಾಷೆಯಾಗಿವೆ. ಈ ತುಂಟ ಆನೆಯು ತಮಾಷೆಯಾಗಿ ಕಾಡೆಮ್ಮೆಗೆ ಕಿಕ್ ಮಾಡಿತು. ಕೀಟಲೆ ಮಾಡುವ ಅರ್ಥ ಏನೆಂದು ಆನೆಗೆ ತಿಳಿದಿದೆ ಎಂದು ಸುಸಾಂತ್ ನಂದಾ ಅವರು ವಿಡಿಯೋ ಕುರಿತು ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಕಾಡಾನೆಗಳ ಹಿಂಡು ಹಾಗೂ ಕಾಡೆಮ್ಮೆಗಳ ಸಮೂಹ ಒಂದೇ ಕಡೆ ಇರುವಾಗ ಆನೆ ಮತ್ತು ಕಾಡೆಮ್ಮೆಯೊಂದು ಎದರು-ಬದರಾಗುತ್ತವೆ. ಸೊಂಡಿಲು ಹಾಗೂ ದೇಹವನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಕಾಡೆಮ್ಮೆಗೆ ಚಮಕ್ ಕೊಡುವ ಆನೆ ಬಳಿಕ ನಿಧಾನವಾಗಿ ಹೋಗಿ ಮಲಗಿದ್ದ ಕಾಡೆಮ್ಮೆಯ ತಲೆಗೆ ಕಾಲಿನಿಂದ ಒದೆಯುತ್ತದೆ. ಇದರಿಂದ ರೊಚ್ಚಿಗೇಳುವ ಕಾಡೆಮ್ಮೆ ಆನೆಗೆ ತಿವಿಯುತ್ತದೆ. ಯಾಕಾದ್ರೂ ಕೆಣಕಿದ್ನೋ ಎಂಬಂತೆ ಆನೆ ಅಲ್ಲಿಂದ ಪರಾರಿಯಾಗುತ್ತದೆ.
ಜೂನ್ 14ರಂದು ವಿಡಿಯೋ ಶೇರ್ ಮಾಡಿದ್ದು, 2500ಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಸುಮಾರು 500 ಬಾರಿ ರೀಟ್ವೀಟ್ ಆಗಿದ್ದು, 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆನೆಯ ತುಂಟಾಟವನ್ನು ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್)