ಮತ್ತೊಂದು ಆತಂಕಕಾರಿ ಘಟನೆ; ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಮರಿ ಸಾವು

Aane JPG
Published on

ಕೋಲ್ಕತ: ಪಶ್ಚಿಮ ಬಂಗಾಳದ ಅಲಿಪುರ್ದುರ್ ಜಿಲ್ಲೆಯ ಜಲ್ದಪರಾ ರಾಷ್ಟ್ರೀಯ ಉದ್ಯಾನದಲ್ಲಿ ಬುಧವಾರ ಆನೆ ಮರಿ ವಿದ್ಯುದಾಘಾತದಿಂದ ಸಾವಿಗೀಡಾಗಿದೆ.

ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆಗಳ ಹಿಂಡೊಂದು ಜಲ್ದಪರಾ ಅರಣ್ಯದ ಉತ್ತರ ಶ್ರೇಣಿಯಿಂದ ಬಂದು ಪೂರ್ವ ಮದರಿಹಾರ್ ಪ್ರದೇಶದ ಬಳಿ ಅಡಿಕೆ ತೋಟವನ್ನು ಪ್ರವೇಶಿಸಿತು.

ಅದೇ ವೇಳೆ, ಮರ ಉರುಳಿ ವಿದ್ಯುತ್ ತಂತಿ ಹರಿಯಿತು. ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಸ್ಪರ್ಶದಿಂದಾಗಿ ಆನೆ ಮರಿ ವಿದ್ಯುದಾಘಾತಕ್ಕೊಳಗಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಗ್ರಾಮಸ್ಥರು ಮುಂದಾಗಬಹುದಾದ ಅನಾಹುತ ತಪ್ಪಿಸಲು, ಸ್ಥಳೀಯ ಅರಣ್ಯಾಧಿಕಾರಿಗಳಿಗೆ ತಿಳಿಸುವ ಮೊದಲು ಆನೆ ಹಿಂಡನ್ನು ಮತ್ತೆ ಅರಣ್ಯದತ್ತ ಓಡಿಸಿದರು.

ಜೂನ್ 16 ರಿಂದ ಪೂರ್ವ ಹಿಮಾಲಯದ ತಪ್ಪಲಿನಲ್ಲಿರುವ ಪ್ರದೇಶದಲ್ಲಿ ಆನೆ ಸಾವನ್ನಪ್ಪಿದ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಬಕ್ಸಾ ಅರಣ್ಯ ಪ್ರದೇಶದ ನೂರ್ಪುರ್ ಗ್ರಾಮದಲ್ಲಿ ಆನೆಯೊಂದು ಸಾವಿಗೀಡಾಗಿತ್ತು.

ಇತ್ತೀಚೆಗೆ ಆನೆಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರ ವನ್ಯಜೀವಿಗಳ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net