

ಶಿವಮೊಗ್ಗ: ತಾಲೂಕಿನ ಪುರದಾಳು ಹಾಗೂ ಕೂಡಿ ಗ್ರಾಮಗಳಲ್ಲಿ ಕಾಡಾನೆಗಳು ಅಡಕೆ-ತೆಂಗು, ಮೆಕ್ಕೆಜೋಳ, ಕಬ್ಬು ನಾಶಪಡಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಪುರದಾಳು ಗ್ರಾಮದ ರಾಜೇಶ ಮತ್ತು ಬೀರಪ್ಪ ಎಂಬವರ ತೋಟ, ಹೊಲಗಳಿಗೆ ಎರಡು ಕಾಡಾನೆಗಳು ಭಾನುವಾರ ತಡ ರಾತ್ರಿ ನುಗ್ಗಿ ಬೆಳೆ ಹಾನಿ ಮಾಡಿವೆ. ಈ ವೇಳೆ ಅಡಕೆ, ತೆಂಗಿನ ಮರಗಳು ಬುಡಮೇಲಾಗಿವೆ. ಮತ್ತೊಂದೆಡೆ ಸಿರಿಗೆರೆ ವಲಯಾರಣ್ಯ ವ್ಯಾಪ್ತಿಯ ಕೂಡಿ ಗ್ರಾಮದಲ್ಲಿ ಜಾಲದ ರಾಮಪ್ಪ ಹಾಗೂ ಕಿರುವಾಸೆ ನಾರಾಯಣಪ್ಪ ಎಂಬುವರ ಜಮೀನಿಗೆ ನುಗ್ಗಿ ಮೆಕ್ಕೆಜೋಳ, ಬಾಳೆಯನ್ನು ನಾಶ ಮಾಡಿವೆ.
ಎರಡೂ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರೂ ಆನೆ ಓಡಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲಾಖೆಯ ಅಧಿಕಾರಿ ಗಳು ರಸ್ತೆಯ ಮಾರ್ಗದಲ್ಲಿ ಮಾತ್ರ ಗಸ್ತು ತಿರುಗುವುದಕ್ಕೆ ಸೀಮಿತಗೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.