

ಬೆಂಗಳೂರು: ಯಶವಂತಪುರದಲ್ಲಿ ಶಾಮಿಯಾನ ಹಾಕುತ್ತಿದ್ದಾಗ ಕಬ್ಬಿಣದ ಕಂಬ ವಿದ್ಯುತ್ ತಂತಿಗೆ ತಗುಲಿ ಯುವಕ ಮೃತಪಟ್ಟಿದ್ದಾನೆ. ಯಶವಂತಪುರ ಎಂ.ಕೆ. ನಗರದ ಪ್ರಜ್ವಲ್ (22) ಮೃತ ಯುವಕ. ಯಶವಂತಪುರ ಪೊಲೀಸರು ಟೆಂಟ್ಹೌಸ್ ಮಾಲೀಕ ಶ್ರೀನಿವಾಸ್, ಎಂ.ಕೆ. ನಗರದ ನಿವಾಸಿ ಖಾಜಿದ್ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಜ್ವಲ್ 4 ದಿನಗಳಿಂದ ಶ್ರೀನಿವಾಸ ಟೆಂಟ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ. ಮೋಹನ್ಕುಮಾರ್ ನಗರದ 3ನೇ ಮುಖ್ಯರಸ್ತೆ ಬಳಿ ಇರುವ ಖಾಜಿದ್ ಅವರ ಮನೆಯಲ್ಲಿ ಶನಿವಾರ ಆಯೋಜಿಸಿದ್ದ ವಿವಾಹ ಸಮಾರಂಭಕ್ಕೆ ಪ್ರಜ್ವಲ್ ಶಾಮಿಯಾನ ಹಾಕುತ್ತಿದ್ದ. ಶಾಮಿಯಾನದ ಕಬ್ಬಿಣದ ಕಂಬವನ್ನು ಪ್ರಜ್ವಲ್ ಮತ್ತು ಮತ್ತೊಬ್ಬ ಯುವಕ ಮೇಲಕ್ಕೆ ಎತ್ತಿದಾಗ ಮೇಲಿದ್ದ ವಿದ್ಯುತ್ ತಂತಿಗೆ ತಾಗಿದೆ. ವಿದ್ಯುತ್ ಹರಿದ ಪರಿಣಾಮ ಪ್ರಜ್ವಲ್ ಹಾಗೂ ಯುವಕ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇಬ್ಬರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಪ್ರಜ್ವಲ್ ಮೃತಪಟ್ಟಿದ್ದ. ಮತ್ತೊಬ್ಬ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ.