

ರಾಣೆಬೆನ್ನೂರ: ರೈತರ ಕೃಷಿ ಪಂಪಸೆಟ್‌ಗಳಿಗೆ ನಿತ್ಯವೂ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಸುಣಕಲ್ಲಬಿದರಿ ಕೆಇಬಿ ಗ್ರೀಡ್‌ಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅಪಾರ ವೆಚ್ಚದ ಬೀಜ ಗೊಬ್ಬರಗಳನ್ನು ಬಳಸಿ ಬಿತ್ತನೆ ಮಾಡಿದ ರೈತರಿಗೆ ಸಾಕಷ್ಟು ತೊಂದರೆ ಆಗಿದೆ. ಬೋರ್‌ವೆಲ್ ಮತ್ತು ಇತರ ನೀರಾವರಿ ಮೂಲದಿಂದ ಹೇಗಾದರೂ ಮಾಡಿ ಬೆಳಗಳನ್ನು ಉಳಿಸಿಕೊಳ್ಳಬೇಕು ಎಂದು ಹರಸಾಹಸ ಪಡುತ್ತಿರುವ ರೈತರಿಗೆ ಹೆಸ್ಕಾಂ ತೊಂದರೆ ನೀಡುತ್ತಿದೆ.
ಹಗಲು 3 ತಾಸು ರಾತ್ರಿ 3 ತಾಸು ವಿದ್ಯುತ್ ಪೂರೈಕೆಯ ಪದ್ಧತಿ ಮತ್ತು ಪದೇ ಪದೇ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರಿಗೆ ನೀರು ಹಾಯಿಸಲು ಆಗದೆ ಅಪಾರ ಪ್ರಮಾಣದ ನಷ್ಟವಾಗುತ್ತಿದೆ. ರಾತ್ರಿ ವೇಳೆಯಲ್ಲಿ ಕಾಡು ಪ್ರಾಣಿಗಳಿಂದ ವಿಷ-ಜಂತುಗಳಿಂದ ರೈತರು ಜೀವವನ್ನು ಬದುಕಿಸಿಕೊಳ್ಳುವುದೆ ಕಷ್ಟಕರವಾಗಿದೆ. ಆದ್ದರಿಂದ ಹಗಲು ಸಮಯದಲ್ಲಿ 6 ತಾಸು ವಿದ್ಯುತ್ ಪೂರೈಕೆ ಮಾಡಬೇಕು.
ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಗ್ರಾಮೀಣ ಭಾಗದಲ್ಲಿ ಹೆಚ್ಚು ಸಾರ್ಮಥ್ಯದ ಗ್ರೀಡಗಳನ್ನು ಸ್ಥಾಪಿಸಬೇಕು. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ತೀವ್ರ ತರನಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಇಂಜನಿಯರ್ ರಾಜು ಅರಳಿಕಟ್ಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಈರಣ್ಣ ಹಲಗೇರಿ, ಶಿವಾನಂದ ಲಿಂಗದಹಳ್ಳಿ, ಮಹಾದೇವಪ್ಪ ಜಾಪಾಳಿ, ಆರ್.ಡಿ. ಪಾಟೀಲ, ಬಸವರಾಜ ಕೊಂಗಿ, ಗಿರೀಶ ಹುಡೇದ, ಮಂಜಪ್ಪ ಲಿಂಗದಹಳ್ಳಿ, ಸುರೇಶ ಅರಳಿ, ಪರ್ವತಗೌಡ ಕುಸಗೂರ, ಶೈಲಾ ಕೊಟ್ಟದ, ರತ್ನಮ್ಮ ಬಡಿಗೇರ, ಕಾವ್ಯಾ ಪೂಜಾರ, ಬೇಬಿ ತಳವಾರ, ಯಮನವ್ವ ಅಗಸರ, ನಿರ್ಮಲಾ ಜೋಗೇರ, ರೇಖಾ ಅಳ್ಳೇರ ಮತ್ತಿತರರು ಪಾಲ್ಗೊಂಡಿದ್ದರು.